ಕೂಡಿಗೆ, ಆ. 29: ಕೇಂದ್ರೀಯ ಒಳನಾಡು ಮೀನುಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ಇವರ ವತಿಯಿಂದ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ಹೈದರಾಬಾದ್ ಇವರ ಪ್ರಾಯೋಜಕತ್ವದಲ್ಲಿ ಜಲಾಶಯಗಳಲ್ಲಿ ಮೀನುಗಾರಿಕಾ ನಿರ್ವಹಣೆ ಮತ್ತು ಉದ್ಯೋಗವಕಾಶಗಳಿಗೆ ಸಂಬಂಧಿಸಿದಂತೆ ಮೂರು ದಿನಗಳ ಕೌಶಲ್ಯ ತರಬೇತಿ ಕಾರ್ಯಾಗಾರವು ಹಾರಂಗಿಯ ಮೀನುಮರಿ ಉತ್ಪಾದನಾ ಹಾಗೂ ಪಾಲನಾ ಕೇಂದ್ರದ ಆವರಣದಲ್ಲಿ ನಡೆಯುತ್ತಿದೆ.

ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷೆ ಪ್ರೀತಂ ಪಣಿಕರ್ ಉದ್ಘಾಟಿಸಿ, ಜಲಾಶಯಗಳಲ್ಲಿ ಮೀನುಮರಿಗಳ ಬಿಡುವಿಕೆಯ ಮೂಲಕ ಮೀನುಮರಿ ಉತ್ಪಾದನೆ ಮತ್ತು ಅವುಗಳನ್ನು ಹಿಡಿಯುವ ಬಗ್ಗೆ ನೂತನ ಮಾದರಿಯ ತಂತ್ರಜ್ಞಾನದ ಯೋಜನೆಯ ಬಗ್ಗೆ ಮಾಹಿತಿ ನೀಡುವದು ಮತ್ತು ಮೀನುಗಾರ ಸಹಕಾರ ಸಂಘದ ಬೇಕು ಬೇಡಿಕೆಗಳ ಬಗ್ಗೆ, ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಅವಕಾಶಗಳ ಬಗ್ಗೆ ಚರ್ಚೆಯನ್ನು ಈ ಕಾರ್ಯಾಗಾರದಲ್ಲಿ ನಡೆಸಲಾಗುವದು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ್ ಮಾತನಾಡಿ, ಪ್ರಧಾನಮಂತ್ರಿ ಅವರ ಯೋಜನೆಯಾದ ನೀಲಿನಕ್ಷಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿರುವ ಮೀನುಗಾರರ ಸಂಘಗಳ ಅಭಿವೃದ್ಧಿಗೆ ಈಗಾಗಲೇ ಸರ್ಕಾರ 80 ಲಕ್ಷ ರೂ ಯೋಜನೆಗಳನ್ನು ಮಂಜೂರು ಮಾಡಿದ್ದು, ಮೀನುಗಾರರ ಸಂಘದವರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಮೀನುಗಾರರಿಗೆ ಬೇಕಾಗುವ ಸವಲತ್ತುಗಳಿಗೆ ಶೇ. 50 ರಷ್ಟು ಸಬ್ಸಿಡಿಯಲ್ಲಿ ವಸ್ತುಗಳನ್ನು ನೀಡಲಾಗುವದು ಎಂದು ಮಾಹಿತಿ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಸೋಮವಾರಪೇಟೆ ತಾಲೂಕು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಭರತ್ ಮಾತನಾಡಿ, ಈಗಾಗಲೇ ಮೀನುಗಾರರಿಗೆ ಮೀನುಮರಿಗಳ ವಿತರಣೆ ಮತ್ತು ಪಂಜರಗಳಲ್ಲಿ ಮೀನು ಸಾಕಾಣಿಕೆ ಮತ್ತು ನಿರ್ವಹಣೆ, ಪಂಜರದ ಗಾತ್ರ ಮತ್ತು ಆಕಾರಗಳ ಬಗ್ಗೆ ಮೀನುಗಾರರು ತಿಳಿದುಕೊಳ್ಳುವದರಿಂದ ಸಾಕಾಣಿಕೆಗೆ ಅನುಕೂಲವಾಗುತ್ತದೆ. ಇದರಿಂದ ಮೀನಿನ ಉತ್ಪತ್ತಿ ಹೆಚ್ಚಿದಂತೆ ಆದಾಯವು ಹೆಚ್ಚುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯು ಈ ಕಾರ್ಯಾಗಾರದಲ್ಲಿ ತಿಳಿಯುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವೇರಿ ಮೀನುಗಾರರ ಸಂಘದ ಅಧ್ಯಕ್ಷ ಶ್ರೀನಿವಾಸ್ ವಹಿಸಿದ್ದರು. ಈ ಸಂದರ್ಭ ಸಂಶೋಧನಾ ಸಂಸ್ಥೆಯ ಕಾರ್ಯದರ್ಶಿ ವಿಜಯ್‍ಕುಮಾರ್, ಹಾರಂಗಿ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರದ ಸಹಾಯಕ ನಿರ್ದೇಶಕ ಸಚಿನ್ ಇದ್ದರು.