ಪೊನ್ನಂಪೇಟೆ, ಆ. 28: ಸಚಿವ ಸುರೇಶ್‍ಕುಮಾರ್ ಅವರಿಗೆ ಪೊನ್ನಂಪೇಟೆ ನಾಗರಿಕ ವೇದಿಕೆ ವತಿಯಿಂದ ಕೊಡಗಿನ ಪ್ರವಾಹದಲ್ಲಿ ಸಂಕಷ್ಟಕ್ಕೀಡಾದವರಿಗೆ ಆದಷ್ಟು ಬೇಗ ಸರ್ಕಾರದಿಂದ ನೆರವು ನೀಡಬೇಕೆಂದು ಒತ್ತಾಯಿಸಿ ಮನವಿ ಪತ್ರ ನೀಡಲಾಯಿತು. ಮಡಿಕೇರಿಯ ಸುದರ್ಶನ ಅತಿಥಿ ಗೃಹಕ್ಕೆ ತೆರಳಿ ಮಾಚಿಮಂಡ ಸುರೇಶ್, ಎರ್ಮು ಹಾಜಿ, ಎಂ.ಟಿ. ಅಪ್ಪಚ್ಚು, ಬೇಗೂರು ಗ್ರಾಂ.ಪಂ. ಸದಸ್ಯ ಗಿರೀಶ್, ಮಾಜಿ ಜಿ.ಪಂ. ಸದಸ್ಯ ಮೂಕಳೆರ ಕುಶಾಲಪ್ಪ, ಮಾಚಿಮಾಡ ಸುರೇಶ್ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಕಾರ್ಯ ನಿರ್ವಹಣಾಧಿಕಾರಿ ಪ್ರವಾಹ ಸಂದರ್ಭ ಜನರ ಸಂಕಷ್ಟಕ್ಕೆ ಸ್ಪಂದಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.