ಕೂಡಿಗೆ, ಆ. 28: ಹೆಬ್ಬಾಲೆಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ 2019-20ನೇ ಸಾಲಿನ ಶ್ರೀ ಕಾವೇರಿ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭ ಹೆಬ್ಬಾಲೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಎಲ್. ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ವಿದ್ಯಾರ್ಥಿ ಸಂಘವನ್ನು ಪುರುಷೋತ್ತಮ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ತಮ್ಮ ಗುರಿ ಸಾಧಿಸುವ ಛಲವಿರಬೇಕು. ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ತಮ್ಮ ಮುಂದಿನ ಭವಿಷ್ಯಕ್ಕಾಗಿ ಜೀವನದ ಮೌಲ್ಯಗಳ ಮಹತ್ವವನ್ನು ಅರಿತುಕೊಂಡರೇ ಮೌಲ್ಯಾಧಾರಿತ ಜೀವನ ನಡೆಸಲು ಸಾಧ್ಯ ಎಂದರು. ನಿವೃತ್ತ ಪ್ರಾಂಶುಪಾಲ ಲೋಹಿತಾಶ್ವ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯದ ಶಿಕ್ಷಣ ಅವಶ್ಯಕವಾಗಿರುತ್ತದೆ. ಆಧುನಿಕ ಜಗತ್ತಿನ ಇಂದಿನ ಕಾಲಗಟ್ಟದಲ್ಲಿ ಉತ್ತಮವಾದ ಸಮಾಜ ನಿರ್ಮಾಣಕ್ಕೆ ಸಾಮಾಜಿಕ ಜವಾಬ್ದಾರಿಗಳ ಅರಿವು ಮುಖ್ಯವಾಗಿರುತ್ತದೆ. ಇವುಗಳನ್ನು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಮೈಗೂಡಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾದ ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್.ಆರ್. ಶ್ರೀನಿವಾಸ್, ರೇಷ್ಮೆ ಮಂಡಳಿ ಮಾಜಿ ಸದಸ್ಯ ಹೆಚ್.ಕೆ. ನಾರಾಯಣ್, ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸ್ವದೇಶ್‍ಕುಮಾರ್, ಕಾರ್ಯದರ್ಶಿ ಹೆಚ್.ಆರ್. ನಾಗೇಂದ್ರ, ಗುರುವಂದನಾ ಸಮಿತಿಯ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಪ್ರಥಮ ದರ್ಜೆ ಗುತ್ತಿಗೆದಾರ ಹೆಚ್.ಆರ್. ಮಂಜುನಾಥ್ ಇದ್ದರು.

ಈ ಸಂದರ್ಭ ಪಿ.ಯು.ಸಿ. ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗುರುವಂದನಾ ಸಮಿತಿಯ ಸಾಧಕರಾದ ಹೆಚ್.ವಿ. ಶಿವಪ್ಪ, ಲೋಹಿತಾಶ್ವ, ಭಾರಧ್ವಾಜ ಕೆ. ಆನಂದತೀರ್ಥ, ಹೆಚ್.ಎಸ್. ರಾಮಶೆಟ್ಟಿ, ಪುರುಷೋತ್ತಮ್, ಹೆಚ್.ಎನ್. ಸುಬ್ರಮಣಿ, ಎಂ.ಎನ್. ಮೂರ್ತಿ, ಹೆಚ್.ಎಸ್. ಅಶೋಕ್, ಹೆಚ್.ಎನ್. ಪುಟ್ಟೇಗೌಡ, ಕೆ.ಕೆ. ನಾಗರಾಜಶೆಟ್ಟಿ, ಉದಯಕುಮಾರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭ ಹೆಬ್ಬಾಲೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಧರ್ಮಪ್ಪ, ಉಪನ್ಯಾಸಕ ವೃಂದ ಇದ್ದರು.