ಒಡೆಯನಪುರ, ಆ. 28: ಪ್ರತಿಯೊಬ್ಬ ವಿದ್ಯಾರ್ಥಿಗೆ ಪಠ್ಯ ಹಾಗೂ ಕ್ರೀಡಾ ಶಿಕ್ಷಣ ಅನಿವಾರ್ಯವಾಗಿದೆ ಎಂದು ಮಾಜಿ ಜಿ.ಪಂ. ಅಧ್ಯಕ್ಷೆ ಹೆಚ್.ಬಿ. ಜಯಮ್ಮ ಅಭಿಪ್ರಾಯ ಪಟ್ಟರು.

ಸಮೀಪದ ಹಂಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ನಡೆಯುತ್ತಿರುವ ಹಂಡ್ಲಿ ಕ್ಲಸ್ಟರ್ ವ್ಯಾಪ್ತಿಯ ವಲಯಮಟ್ಟದ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇಂದಿನ ದಿನದಲ್ಲಿ ಪಠ್ಯ ಮತ್ತು ಕ್ರೀಡಾ ಶಿಕ್ಷಣ ಮಹತ್ವದ ಸ್ಥಾನ ಪಡೆದಿದೆ, ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲೇ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಮುಂದೆ ಕ್ರೀಡಾ ಪ್ರತಿಭೆಗಳಾಗಲು ಸಾಧ್ಯವಾಗುತ್ತದೆ ಎಂದರು. ಸರಕಾರಿ ಶಾಲೆಗಳಲ್ಲಿ ಪಠ್ಯ, ಕ್ರೀಡಾ ಹಾಗೂ ಸಾಂಸ್ಕøತಿಕ ಪ್ರತಿಭೆಗಳಿದ್ದರೂ ಪೋಷಕರು ಮಕ್ಕಳ ಪ್ರತಿಭೆಗಳನ್ನು ಪ್ರೋತ್ಸಾಹಿಸದೆ ಖಾಸಗಿ, ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿರುವದು ಕಳವಳಕಾರಿಯಾಗಿದೆ. ಈ ನಿಟ್ಟಿನಲ್ಲಿ ಸರಕಾರ ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸರಕಾರಿ ಶಾಲೆಗಳಿಗೂ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಎಂದು ಹೇಳಿದರು.

ಹಂಡ್ಲಿ ಗ್ರಾ.ಪಂ. ಅಧ್ಯಕ್ಷ ಹೆಚ್.ಎನ್. ಸಂದೀಪ್ ಮಾತನಾಡಿ, ಸೋಲು-ಗೆಲವಿನ ಸೋಪಾನವಾಗಿರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರೀಡಾಕೂಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪಠ್ಯದ ಜೊತೆಯಲ್ಲಿ ಕ್ರೀಡೆ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಸ್ಫರ್ಧೆಯಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಲೋಕೇಶ್ ಸಮಾರಂಭ ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಹಂಡ್ಲಿ ಗ್ರಾ.ಪಂ. ಉಪಾಧ್ಯಕ್ಷೆ ರೂಪ ದಿನೇಶ್, ಶಾಲಾ ಮುಖ್ಯ ಶಿಕ್ಷಕಿ ಸುಶೀಲ, ದೈಹಿಕ ಶಿಕ್ಷಣ ವಲಯ ಕಾರ್ಯದರ್ಶಿ ಮಲ್ಲಿಕಾರ್ಜುನ, ಶಿಕ್ಷಕ ಪ್ರಮುಖರಾದ ಮಂಜಯ್ಯ, ಸಾವಿತ್ರಿ, ಚಂದ್ರಶೇಖರ್, ಗಿರೀಶ್ ಮುಂತಾದವರು ಹಾಜರಿದ್ದರು. ಕ್ರೀಡಾಕೂಟದಲ್ಲಿ ಹಂಡ್ಲಿ ಕ್ಲಸ್ಟರ್ ವ್ಯಾಪ್ತಿಯ ವಿವಿಧ 13 ಶಾಲೆಗಳು ಪಾಲ್ಗೊಂಡಿವೆ.