ಗೋಣಿಕೊಪ್ಪಲು, ಆ. 28: ಬಿಟ್ಟಂಗಾಲ, ಬಾಳುಗೋಡು ವ್ಯಾಪ್ತಿಯ ಕಂಡಂಗಾಲ, ಬಿಟ್ಟಂಗಾಲ, ಅಂಬಟ್ಟಿ, ಕೊಳತ್ತೋಡು, ಬೈಗೋಡು ಗ್ರಾಮಗಳಲ್ಲಿ ರೈತರು ಸಾಕಿರುವ ಹಸುಗಳು ಕಾಣೆಯಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಗ್ರಾಮಗಳಲ್ಲಿ ಹಲವು ತಿಂಗಳ ಹಿಂದೆ ಹಸುಗಳು ಒಂದರ ಹಿಂದೆ ಒಂದು ಕಾಣೆಯಾಗುತ್ತಿದ್ದು ಇದರ ಹಿಂದೆ ದೊಡ್ಡದಾದ ಗುಂಪು ಈ ರೀತಿಯ ದಂಧೆಯಲ್ಲಿ ಇಳಿದಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈಗಾಗಲೇ ಪಾಲಿಬೆಟ್ಟ ಗೋಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಇಲ್ಲಿಯು ಕೂಡ ಇಂತಹ ಕೃತ್ಯ ನಡೆಸಿರಬಹುದೆಂದು ಹೇಳಿಕೆ ನೀಡಿರುವ ಬಿಟ್ಟಂಗಾಲ ಬಿಜೆಪಿ ಮಂಡಲ ಅಧ್ಯಕ್ಷ ಅಮ್ಮುಣಿಚಂಡ ರಂಜು ಪೂಣಚ್ಚ, ಕುಪ್ಪಂಡ ಮನು ಪೂವಯ್ಯ, ಮೋಹನ ಮೊಣ್ಣಪ್ಪ, ಮೂಕಚಂಡ ಸುಬ್ಬಯ್ಯ, ಬಿ.ಎನ್. ಯೋಗೇಶ್, ಮುಖ್ಯ ಆರೋಪಿಯು ಈ ಭಾಗದವನಾಗಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.