ವೀರಾಜಪೇಟೆ, ಆ. 28: ಎಸ್.ಎನ್.ಡಿ.ಪಿ. ವೀರಾಜಪೇಟೆ ಶಾಖೆಯ ಅಧ್ಯಕ್ಷರಾಗಿ ದ್ವಿತೀಯ ಬಾರಿಗೆ ಟಿ.ಎ. ನಾರಾಯಣ ಅವರು ಪುನರಾಯ್ಕೆಯಾಗಿದ್ದಾರೆ.
ವೀರಾಜಪೇಟೆ ನಗರದ ಗೌರಿಕೆರೆ ರಸ್ತೆಯಲ್ಲಿರುವ ಶ್ರೀ ನಾರಾಯಣ ಗುರು ಧರ್ಮಪರಿಪಾಲನ ಯೋಗಂ (ಎಸ್.ಎನ್.ಡಿ.ಪಿ.) ಶಾಖೆಯ ವಾರ್ಷಿಕ ಮಹಾಸಭೆ ಮೀನುಪೇಟೆಯ ಚೈತನ್ಯ ಮುತ್ತಪ್ಪ ದೇವಾಲಯದ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಿದ್ದಾಪುರ ಯೂನಿಯನ್ ಶಾಖೆಯ ಕೆ.ವಿ. ಕಿಶೋರ್ ಮಾತನಾಡಿ, ಶ್ರೀ ನಾರಾಯಣ ಗುರು ಅವರುಗಳು ಪ್ರತಿಪಾದನೆ ಮಾಡಿರುವಂತೆ ಒಂದೇ ಜಾತಿ, ಒಂದೇ ಮತ ಒಬ್ಬನೆ ದೇವರು ಎಂಬದನ್ನು ಪ್ರತಿಯೊಬ್ಬ ಮನುಷ್ಯನು ತಿಳಿದು ನಡೆದುಕೊಳ್ಳಬೇಕು. ಕೊಡಗು ಜಿಲ್ಲೆಯು ಇಂದು ಪ್ರಾಕೃತಿಕ ವಿಕೋಪದಿಂದ ತತ್ತರಿಸುತ್ತಿದ್ದು, ಜನಸಾಮಾನ್ಯನ ಕೂಗಿಗೆ ಸಂಸ್ಥೆಯು ಸ್ಪಂದಿಸಬೇಕು ಎಂದು ಕರೆ ನೀಡಿದರು.
ಮೂರು ವರ್ಷಗಳಿಗೊಮ್ಮೆ ನಡೆಸುವ ಮಹಾಸಭೆಯಲ್ಲಿ ಸರ್ವಾನುಮತದಿಂದ ಟಿ.ಎ. ನಾರಾಯಣ ಅವರನ್ನು ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಟಿ.ಆರ್. ಗಣೇಶ್, ಕಾರ್ಯದÀರ್ಶಿಯಾಗಿ ಟಿ.ಕೆ. ಪದ್ಮಾನಾಭ ಮತ್ತು ಸಹ ಕಾರ್ಯದರ್ಶಿಯಾಗಿ ವಿ.ಬಿ. ಸುರೇಶ್ ಅವರನ್ನು ಆಯ್ಕೆಗೊಳಿಸಲಾಯಿತು. ಅಲ್ಲದೆ 12 ಮಂದಿ ನಿರ್ದೇಶಕರನ್ನು ಆಡಳಿತ ಮಂಡಳಿಯ ಸದಸ್ಯರನ್ನಾಗಿ ನಿಯುಕ್ತಿಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಮತ್ತು ಪಾರಿತೋಷಕ ನೀಡಿ ಗೌರವಿಸಲಾಯಿತು.
ಮಾಜಿ ಉಪಾಧ್ಯಕ್ಷ ಟಿ.ಆರ್. ಪ್ರಬಾಕರ್, ಕಾರ್ಯದರ್ಶಿ ದಾಮೋದರ್, ಹೆಗ್ಗಳ ಶಾಖೆಯ ವಿಜಯನ್, ಬಿಲ್ಲವ ಸಮಾಜದ ಕಾರ್ಯಾಧ್ಯಕ್ಷ ಬಿ.ಆರ್. ರಾಜ, ಶಾಖೆಯ ಗೌರವಾಧ್ಯಕ್ಷ ಅಚ್ಚುಕುಟ್ಟಿ ಉಪಸ್ಥಿತರಿದ್ದರು.
- ಕೆ.ಕೆ.ಎಸ್.