ಮಡಿಕೇರಿ, ಆ. 28: ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಪ್ರತೀ ವರ್ಷದಂತೆ ಈ ಬಾರಿಯೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವದೆಂದು ತಿಳಿಸಿರುವ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅವರು, ಗೌಡ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿ ಗಳು ನ. 20 ರೊಳಗೆ ಸಂಘದ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಎಸ್‍ಎಸ್‍ಎಲ್‍ಸಿ ಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ. 85ಕ್ಕೆ ಮೇಲ್ಪಟ್ಟು ಹಾಗೂ ನಗರ ಪ್ರದೇಶದಲ್ಲಿ ಶೇ. 90ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಪಿಯುಸಿ ಮತ್ತು ಪದವಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿರುವ ಹಾಗೂ ಸಿಇಟಿ ಮತ್ತು ಎನ್‍ಇಇಟಿಯಲ್ಲಿ 1000 ರ್ಯಾಂಕ್ ಒಳಗೆ ಪಡೆದುಕೊಂಡಿರುವ ಗೌಡ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವದು ಎಂದು ತಿಳಿಸಿದರು.
ವೈದ್ಯಕೀಯ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಪಡೆದ ಮತ್ತು ಕ್ರೀಡೆ, ಕಲೆ, ಸಾಂಸ್ಕøತಿಕ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಗೌಡ ಜನಾಂಗದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸನ್ಮಾನಿಸಲಾಗುವದು. ಪ್ರತಿಭಾವಂತ ವಿದ್ಯಾರ್ಥಿಗಳು ನ. 20 ರೊಳಗೆ ತಮ್ಮ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯೊಂದಿಗೆ ಹಾಗೂ ಸಾಧಕರು ಸೂಕ್ತ ದಾಖಲೆಗಳ ಸಹಿತ ಸಂಘದ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ರಮೇಶ್ ಜೋಯಪ್ಪ ಮಾಹಿತಿ ನೀಡಿದರು.
ವಿವಿಧ ಸ್ಪರ್ಧೆಗಳು
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಗೌಡ ಜನಾಂಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಬಾರಿಯೂ ಸೆ. 22 ರಂದು ಮಡಿಕೇರಿಯ ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವದು.
ಎಲ್‍ಕೆಜಿಯಿಂದ 1ನೇ ತರಗತಿ ಮಕ್ಕಳಿಗೆ ಛದ್ಮವೇಷ, 2 ರಿಂದ 4ನೇ ತರಗತಿ ಮಕ್ಕಳಿಗೆ ಚಿತ್ರಕಲೆ, 5 ರಿಂದ 7ನೇ ತರಗತಿ ಮಕ್ಕಳಿಗೆ ಸಾಮಾನ್ಯ ಜ್ಞಾನ ಸ್ಪರ್ಧೆ, 8 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ “ಕೊಡಗಿನಲ್ಲಿ 2018-19ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ-ಕಾರಣ ಹಾಗೂ ಪರಿಹಾರ” ಎಂಬ ವಿಷಯದ ಕುರಿತು 3+1 ನಿಮಿಷದ ಭಾಷಣ ಸ್ಪರ್ಧೆ ನಡೆಸಲಾಗುವದು ಎಂದು ತಿಳಿಸಿದರು. ಅಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳ ಪೋಷಕರಿಗೆ 3+1 ನಿಮಿಷದ ಸೋಬಾನೆ ಹಾಡು ಸ್ಪರ್ಧೆಯನ್ನೂ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಸೆ. 22 ರಂದು ಬೆಳಿಗ್ಗೆ 10 ಗಂಟೆಯೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿ ಕೊಳ್ಳಬೇಕು. ಜಿಲ್ಲೆಯ ವಿವಿಧೆಡೆ ಗಳಿಂದ ಸ್ಪರ್ಧೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಬಸ್ ಪ್ರಯಾಣ ಭತ್ಯೆ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗುವದು ಎಂದು ರಮೇಶ್ ಜೋಯಪ್ಪ ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಕಾರ್ಯಕದರ್ಶಿ ಕೊಟ್ಟಕೇರಿಯನ ಡಿ. ದಯಾನಂದ, ಸಹ ಕಾರ್ಯದರ್ಶಿ ತಳೂರು ಕೆ. ದಿನೇಶ್‍ಕುಮಾರ್, ನಿರ್ದೇಶಕರಾದ ಪರಿಚನ ಸತೀಶ್ ಹಾಗೂ ಕೆದಂಬಾಡಿ ಕಾಂಚನಾ ಕೀರ್ತನ್ ಉಪಸ್ಥಿತರಿದ್ದರು.