ನಾಪೋಕ್ಲು, ಆ. 28: ಅಕಸ್ಮಿಕ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದಾಗಿ ಮನೆಯೊಳಗಿದ್ದ ಚಿನ್ನಾಭರಣಗಳು, ನಗದು ಸೇರಿದಂತೆ ಅಮೂಲ್ಯ ದಾಖಲೆಗಳು ಸುಟ್ಟುಭಸ್ಮವಾದ ಘಟನೆ ನಾಪೋಕ್ಲು ಬಳಿಯ ಎಮ್ಮೆಮಾಡುವಿನಲ್ಲಿ ಸಂಭವಿಸಿದೆ.

ಎಮ್ಮೆಮಾಡು ಗ್ರಾಮದ ಸಿ.ಎಂ. ಜಕ್ರಿಯಾ ಎಂಬವರಿಗೆ ಸೇರಿದ ಮನೆ ಹಾಗೂ ಚಿನ್ನಾಭರಣಗಳು ಸೇರಿದಂತೆ ಸುಮಾರು 2.55 ಲಕ್ಷ ರೂಪಾಯಿಗಳು ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ.

ಎಮ್ಮೆಮಾಡು ಗ್ರಾಮದ ಜಕ್ರಿಯಾ ತಮ್ಮ ತಾಯಿ ಹಾಗೂ ಅಣ್ಣಂದಿರೊಂದಿಗೆ ಚಂಬಾರಂಡ ದೊಡ್ಡ ಮನೆಯಲ್ಲಿ ವಾಸಿಸುತ್ತಿದ್ದು, ಮಂಗಳವಾರ ಮಧ್ಯಾಹ್ನ ರೂಮಿಗೆ ತೆರಳಿದ ಸಂದರ್ಭ ಹೊಗೆ ಬರುತ್ತಿರುವದನ್ನು ಗಮನಿಸಿ ಮನೆ ಮಂದಿಗೆ ವಿಷಯ ತಿಳಿಸಿದ್ದಾರೆ. ಮನೆಯಲ್ಲಿದ್ದವರು ಹೊರಗೆ ಬಂದಿದ್ದರಿಂದಾಗಿ ಪ್ರಾಣಾಪಾಯ ಸಂಭವಿಸಿಲ್ಲವೆನ್ನಲಾಗಿದೆ.

ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಚಿನ್ನಾಭರಣಗಳು ಸೇರಿದಂತೆ ಮರದ ಕಪಾಟಿನಲ್ಲಿಟ್ಟಿದ್ದ ಸುಮಾರು 2.55 ಲಕ್ಷ ರೂಪಾಯಿಗಳು ಸೇರಿದಂತೆ ಅಮೂಲ್ಯ ದಾಖಲೆಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿದೆ ಎನ್ನಲಾಗಿದ್ದು, ಘಟನೆ ಕುರಿತಂತೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- ದುಗ್ಗಳ ಸದಾನಂದ