ಮಡಿಕೇರಿ, ಆ. 28: ಸಾರ್ವಜನಿಕರ ವಿವಿಧ ಕುಂದುಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕರ್ನಾಟಕ ಲೋಕಾಯುಕ್ತ ರಿಂದ ವಿಶೇಷ ಕ್ರಮವೊಂದನ್ನು ರಾಜ್ಯಾದ್ಯಂತ ಅನುಸರಿಸಲಾಗುತ್ತಿದೆ. ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರ ಆದೇಶದಂತೆ ಎಲ್ಲಾ ಜಿಲ್ಲೆಗಳಲ್ಲೂ ಈ ಬಗ್ಗೆ ಕ್ರಮ ವಹಿಸಲಾಗುತ್ತಿದ್ದು, ನಿರ್ದಿಷ್ಟ ಸ್ಥಳ ಹಾಗೂ ನಿಗದಿತ ದಿನಾಂಕದಂದು ಸಾರ್ವಜನಿಕರನ್ನು ಒಳಗೊಂಡಂತೆ ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆಗಳ ಬಗ್ಗೆ ಅರ್ಜಿ ಸ್ವೀಕಾರ ಪರಿಶೀಲನೆಯೊಂದಿಗೆ ಅಲ್ಲೇ ಬಗೆಹರಿಸಬಹುದಾದ ವಿಚಾರಗಳನ್ನು ಸ್ಥಳದಲ್ಲೇ ಬಗೆಹರಿಸಲು ಮುಂದಾಗಲಾಗುವದು ಎಂದು ಕೊಡಗಿನ ಲೋಕಾಯುಕ್ತ ಇನ್ಸ್‍ಪೆಕ್ಟರ್ ಪೂಣಚ್ಚ ಅವರು ತಿಳಿಸಿದ್ದಾರೆ.
ಇದರಂತೆ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಯನ್ನು ಎಲ್ಲಾ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗುತ್ತಿದೆ. ಸೆಪ್ಟೆಂಬರ್ 5 ರಂದು ಬೆ. 11 ರಿಂದ ಅಪರಾಹ್ನ 1ರವರೆಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ, ಸೆ. 7 ರಂದು ಇದೇ ಸಮಯದಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಿಗದಿಯಾಗಿದೆ. ಸೆ. 9 ರಂದು ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಹಾಗೂ ತಾ. 11 ರಂದು ಕುಶಾಲನಗರ ವ್ಯಾಪ್ತಿಯ ಸಭೆ ಮುಳ್ಳುಸೋಗೆ ಗ್ರಾ.ಪಂ. ಸಭಾಂಗಣದಲ್ಲಿ ಜರುಗಲಿದೆ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.