ಮಡಿಕೇರಿ, ಆ. 28: ಕರ್ನಾಟಕ ಋಣ ಪರಿಹಾರ ವಿಧೇಯಕ ಜಾರಿಗೆ ಬಂದಿದೆ. ಅದರಂತೆ ಸಣ್ಣ ರೈತರು, ಭೂ ರಹಿತ ಕೃಷಿ ಕಾರ್ಮಿಕರು ಮತ್ತು ದುರ್ಬಲ ವರ್ಗದ ಜನರು (ವಾರ್ಷಿಕ ಆದಾಯ ರೂ.1,20,000/- ಮೀರದಿರುವ) ಖಾಸಗಿ ಲೇವಾದೇವಿದಾರರು ಮತ್ತು ಗಿರಿವಿದಾರರಿಂದ ಸಾಲ ಪಡೆದಿದ್ದಲ್ಲಿ ಕಾಯ್ದೆಯ ಸೌಲಭ್ಯಗಳನ್ನು ಪಡೆಯಲು ಅರ್ಹರಿರುತ್ತಾರೆ.
ಈ ವಿಚಾರದಲ್ಲಿ ಮಡಿಕೇರಿ ಉಪವಿಭಾಗ ವ್ಯಾಪ್ತಿಯ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕುಗಳ ಅರ್ಹ ಸಾರ್ವಜನಿಕರು, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಕಚೇರಿಗಳಲ್ಲಿ ನಿಗಧಿತ ನಮೂನೆ-02ರ ಅರ್ಜಿಯನ್ನು ಪಡೆದು, ಅಗತ್ಯ ದಾಖಲಾತಿಯೊಂದಿಗೆ ಋಣ ಪರಿಹಾರ ಅಧಿಕಾರಿಯಾದ ಉಪವಿಭಾಗಾಧಿಕಾರಿಗಳು, ಮಡಿಕೇರಿ ಉಪವಿಭಾಗ, ಮಡಿಕೇರಿ ಇವರಿಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ಸಾಲಗಾರರು ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಲೇವಾದೇವಿದಾರರು ನೀಡಿರುವ ರಶೀದಿ ಪ್ರತಿ, ಪಡಿತರ ಚೀಟಿ, ತಹಶೀಲ್ದಾರರಿಂದ ಪಡೆದ ಸಣ್ಣ ಹಿಡುವಳಿದಾರ ದೃಢೀಕರಣ ಪತ್ರ, ಭೂ ರಹಿತ ಕೃಷಿ ಕಾರ್ಮಿಕರ ದೃಢೀಕರಣ, ಆದಾಯ ದೃಢೀಕರಣ ಇತ್ಯಾದಿ ಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸಲು ತಾ. 22.10.2019 ಕಡೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಉಪವಿಭಾಗಾಧಿಕಾರಿಗಳು, ಮಡಿಕೇರಿ ಉಪವಿಭಾಗ, ಮಡಿಕೇರಿ ಸಂಬಂಧಿಸಿದ ತಹಶೀಲ್ದಾರ್ ಕಚೇರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.