ಸೋಮವಾರಪೇಟೆ, ಆ. 28: ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಉಚಿತ ಅಡುಗೆ ಅನಿಲ ಸಂಪರ್ಕವನ್ನು ವಿತರಿಸಿದರು.
ಶಾಸಕರ ಕಚೇರಿಯಲ್ಲಿ ಅನಿಲ ಸಂಪರ್ಕ ವಿತರಿಸಿದ ರಂಜನ್, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಿಂದ ಕೋಟ್ಯಾಂತರ ಕುಟುಂಬಗಳಿಗೆ ಇಂದು ಅಡುಗೆ ಅನಿಲ ಸಂಪರ್ಕ ಸಿಗುವಂತಾಗಿದೆ. ಹೊಗೆಮುಕ್ತ ಅಡುಗೆ ಮನೆ ನಿರ್ಮಾಣವಾಗುವ ಮೂಲಕ ಮಹಿಳೆಯರ ಆರೋಗ್ಯವೂ ಸುಧಾರಿಸುತ್ತಿದೆ ಎಂದು ಅಭಿಪ್ರಾಯಿಸಿದರು.
ತಾಲೂಕಿನ ಆಲೂರು-ಸಿದ್ದಾಪುರ, ಕೊಡ್ಲಿಪೇಟೆ, ಗೌಡಳ್ಳಿ, ಮಾಲಂಬಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕ ವಿತರಿಸಲಾಯಿತು.
ಈ ಸಂದರ್ಭ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಸದಸ್ಯರಾದ ಧರ್ಮಪ್ಪ, ಲೀಲಾವತಿ, ಪ್ರಮುಖರಾದ ಮಾಲಂಬಿ ಗಂಗಾಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.