ಚೆಟ್ಟಳ್ಳಿ, ಆ. 28: ಮೈಸೂರು 9ನೇ ವಾರ್ಡಿನ ವಿವಿಧ ಧರ್ಮಗುರುಗಳು ಹಾಗೂ ನಾಗರಿಕರ ಸಹಕಾರ ದೊಂದಿಗೆ ಅಜ್ಜು ಬ್ರದರ್ಸ್ ನೇತೃತ್ವದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ದಿನ ಬಳಕೆಯ ಆಹಾರ ಹಾಗೂ ಸಾಮಗ್ರಿಗಳ ಕಿಟ್‍ಗಳನ್ನು ನೆಲ್ಲಿಹುದಿಕೇರಿ ಸಮೀಪದ ಕುಂಬಾರಗುಂಡಿ ನದಿ ದಡದ ನಿವಾಸಿಗಳಿಗೆ ವಿತರಣೆ ಮಾಡಿದರು
ಪ್ರವಾಹ ಸಂದರ್ಭ ಮನೆ, ಆಸ್ತಿ, ಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿದ್ದ 200ಕ್ಕೊ ಹೆಚ್ಚು ಕುಟುಂಬಗಳಿಗೆ ಆಹಾರ ಪದಾರ್ಥ ಹಾಗೂ ದಿನಬಳಕೆಯ ವಸ್ತುಗಳ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭ ಸಮಾಜ ಸೇವಕ ಅಜ್ಜು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ದುರಂತ ಹಾಗೂ ಮಹಾ ಮಳೆಯ ಪ್ರವಾಹಕ್ಕೆ ಹಲವು ಕುಟುಂಬಗಳು ಆಸ್ತಿ ಪಾಸ್ತಿ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದು ನೊಂದ ಜನರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ದಾನಿಗಳ ಸಹಕಾರದಿಂದ ತುರ್ತು ಅಗತ್ಯಕ್ಕೆ ಬೇಕಾದ ವಸ್ತುಗಳನ್ನು ಇನ್ನೂರಕ್ಕೂ ಹೆಚ್ಚು ಕುಟುಂಬಗಳಿಗೆ ವಿತರಣೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇತರ ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳಿಗೆ ನೆರವಾಗಲು ಮುಂದಾಗುವದಾಗಿ ಹೇಳಿದರು. ಮೈಸೂರು ಮಹಾನಗರ ಪಾಲಿಕೆಯ ಸದಸ್ಯ ಸಮೀ ಅಜ್ಜು ಮಾತನಾಡಿ, ಒಂಬತ್ತನೇ ವಾರ್ಡಿನ ನಾಗರಿಕರು ದಾನಿಗಳು ನಮ್ಮೊಂದಿಗೆ ಕೈ ಜೋಡಿಸಿದ ಹಿನ್ನೆಲೆ ಕೊಡಗು ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ನೀಡಲಾಗಿದೆ ಎಂದರು.
ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಸಲೀಂ ಮಾತನಾಡಿ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ ಕೊಡಗಿನ ಸಂತ್ರಸ್ತ ಜನರಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ.
ಕಳೆದ ಬಾರಿ ಪ್ರವಾಹ ಹಾಗೂ ಪ್ರಕೃತಿ ವಿಕೋಪ ದುರಂತದಲ್ಲಿ ಕೃಷಿ ಫಸಲು ಮನೆ ಮಠಗಳನ್ನು ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದರು.
ಕೊಡಗು ಜಿಲ್ಲೆಗೆ ಕೇಂದ್ರದಿಂದ ವಿಶೇಷ ಅನುದಾನವು ನೀಡದೇ ಕಡೆಗಣಿಸಿದ್ದಾರೆ. ಈ ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರವಿದ್ದರೂ ಕೊಡಗು ಜಿಲ್ಲೆಯ ಜನರ ಸಮಸ್ಯೆಗಳಿಗೆ ವಿಶೇಷ ಅನುದಾನವೂ ನೀಡದೇ ಮತ್ತೆ ಕಡೆಗಣಿಸಿದ್ದಾರೆ. ಜಿಲ್ಲೆಯ ಕಾಫಿ ಬೆಳೆಗಾರರು ರೈತರು ಕಾರ್ಮಿಕರು ಸಂತ್ರಸ್ತ ಕುಟುಂಬಗಳು ಹಲವು ಸಮಸ್ಯೆಗಳ ಎದುರಿಸುತ್ತಿದ್ದರೂ ಸಚಿವ ಸಂಪುಟ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿ ದಿನ ಕಳೆಯುತ್ತಿದ್ದಾರೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರವಾಹದಿಂದ ತತ್ತರಿಸಿದರು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭ ಅಜ್ಜು ಬ್ರದರ್ಸ್ ತಂಡದ ಪ್ರಮುಖರಾದ ಖಾಲಕ್ ಸಾಬ್, ಜಬಿ, ಇಮಾಯನ್, ನಹೀಮ್, ಕಲಿಮುಲ್ಲಾ, ನಾಗರಾಜ್, ರವಿ, ಕುಮಾರ್, ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಸದಸ್ಯ ಸಾಬು ವರ್ಗೀಸ್, ಬ್ರಿಜೀತ್, ಲಿಲ್ಲಿ ಸೇರಿದಂತೆ ಮತ್ತಿತರರು ಹಾಜರಿದ್ದರು.