ಕೂಡಿಗೆ, ಆ. 28: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಜೇನುಕಲ್ಲು ಬೆಟ್ಟದ ಕಾಡಂಚಿನಲ್ಲಿರುವ ಜಯಮ್ಮ ಮಲ್ಲೇಶ್ ಎಂಬವರಿಗೆ ಸೇರಿದ ಮನೆ ಬೆಂಕಿಗಾಹುತಿಯಾದ ಘಟನೆ ನಡೆದಿದೆ.

ಜಯಮ್ಮ ಮತ್ತು ಮಲ್ಲೇಶ್ ದಂಪತಿ ಕೂಲಿ ಕಾರ್ಮಿಕರಾಗಿದ್ದು ಕೂಲಿ ಕೆಲಸಕ್ಕೆ ಸೀಗೆಹೊಸೂರು ಗ್ರಾಮಕ್ಕೆ ತೆರಳಿದ್ದರು. ನಿನ್ನೆ ಸಂಜೆ ಆ ವ್ಯಾಪ್ತಿಯಲ್ಲಿ ಬೀಸಿದ ಭಾರಿ ಗಾಳಿಗೆ ಮನೆಯ ಸಮೀಪದ ವಿದ್ಯುತ್ ಕಂಬದ ಮೇಲೆ ಮರದ ಕೊಂಬೆಗಳು ಬಿದ್ದ ಪರಿಣಾಮ ವಿದ್ಯುತ್ ಶಾರ್ಟ್‍ಸರ್ಕಿಟ್ ಆಗಿ ಮನೆ ಸಂಪೂರ್ಣ ಭಸ್ಮವಾಗಿದೆ.

ಪರಿಶಿಷ್ಟ ಜಾತಿಗೆ ಸೇರಿದ ಇವರಿಗೆ ಗ್ರಾ.ಪಂ. ವತಿಯಿಂದ ಮನೆಯನ್ನು ನಿರ್ಮಾಣ ಮಾಡಿಕೊಡಲಾಗಿತ್ತು. ಮನೆಯ ಒಂದು ಭಾಗಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮ ಮನೆಯ ಒಂದು ಕೋಣೆಯಲ್ಲಿದ್ದ ದಿವಾನ್ ಕಾಟ್ ಬೆಂಕಿಯಲ್ಲಿ ಉರಿದು ಬೂದಿಯಾಗಿದೆ.

ದಿವಾನ್ ಕಾಟ್ ಮೇಲೆ ಹಾಸಿದ್ದ ಹಾಸಿಗೆ ಕೆಳಗೆ ಕೂಲಿ ಮಾಡಿ ಸಂಪಾದಿಸಿದ್ದ 20000ರೂ, ಆಧಾರ ಕಾರ್ಡ್, ಪಡಿತರ ಚೀಟಿ, ಗುರುತಿನ ಚೀಟಿಗಳು ಸೇರಿದಂತೆ ಮನೆಗೆ ಸಂಬಂಧಪಟ್ಟ ದಾಖಲಾತಿಗಳು ಹಾಗೂ ಹಾಸಿಗೆಯ ಮೇಲೆ ಇಟ್ಟಿದ್ದ ಬಟ್ಟೆಗಳು, ಕಂಬಳಿಗಳು ಸಂಪೂರ್ಣ ಭಸ್ಮವಾಗಿದ್ದು, ಬದಲಾಯಿಸಲು ಕೂಡ ಒಂದು ಬಟ್ಟೆಯಿಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಇದರ ಜೊತೆಗೆ ಬೆಂಕಿಯ ಶಾಖಕ್ಕೆ ಮನೆಯ ಗೋಡೆಯು ಸಹ ಬಿರುಕು ಬಿಟ್ಟಿದೆ.

ಬೆಂಕಿ ಕಾಣಿಸಿಕೊಂಡ ವೇಳೆ ಮನೆಯಲ್ಲಿ ಮನೆಯವರು ಇಲ್ಲದ ಕಾರಣ ಯಾವದೇ ಪ್ರಾಣಹಾನಿಯಾಗಿಲ್ಲ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಕೆ. ವಿಶ್ವನಾಥ್, ಕೆ.ಜೆ. ಮಂಜಯ್ಯ, ದಸ್ವಿ ಭೇಟಿ ನೀಡಿ ಪರಿಶೀಲಿಸಿದರು. ನಂತರ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡುವದಾಗಿ ಹಾಗೂ ಬೆಂಕಿಗೆ ಆಹುತಿಯಾಗಿರುವ ಗುರುತಿನ ದಾಖಲಾತಿಗಳನ್ನು ಹೊಸದಾಗಿ ಮಾಡಿಕೊಡುವದಾಗಿ ತಿಳಿಸಿದ್ದಾರೆ.