ಮಡಿಕೇರಿ, ಆ. 27: ಕರ್ನಾಟಕದ ಹಿರಿಯ ಮುತ್ಸದ್ಧಿ ರಾಜಕಾರಣಿ, ರಾಜ್ಯ ಹೈಕೋರ್ಟ್ನ ಹಿರಿಯ ವಕೀಲರಾಗಿದ್ದ ಮಾಜಿ ಶಾಸಕ ಅಜ್ಜಿಕುಟ್ಟೀರ ಕಾರ್ಯಪ್ಪ ಸುಬ್ಬಯ್ಯ (86) ಅವರು ಇಂದು ನಿಧನರಾದರು. ಮೂಲತಃ ವೀರಾಜಪೇಟೆ ತಾಲೂಕಿನ ಹುದಿಕೇರಿ ಸಮೀಪದ ಬೆಳ್ಳೂರಿನವರಾದ ಸುಬ್ಬಯ್ಯ ಕೆಲ ತಿಂಗಳುಗಳಿಂದ ತಮ್ಮ ವಯೋಸಹಜ ಅನಾರೋಗ್ಯದಿಂದಾಗಿ ಬಳಲುತ್ತಿದ್ದರು. ಎ.ಕೆ.ಸುಬ್ಬಯ್ಯ ಅವರನ್ನು ತಾ. 10ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತಜ್ಞವೈದ್ಯರ ತಂಡ ನಿರಂತರವಾಗಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಂದು ಮಧ್ಯಾಹ್ನ ನಿಧನರಾದರು.
ಮೃತರ ಪಾರ್ಥಿವ ಶರೀರವನ್ನು ಬೆಂಗಳೂರಿನ ಆರ್.ಟಿ. ನಗರದ ಅವರ ಮಡಿಕೇರಿ, ಆ. 27: ಕರ್ನಾಟಕದ ಹಿರಿಯ ಮುತ್ಸದ್ಧಿ ರಾಜಕಾರಣಿ, ರಾಜ್ಯ ಹೈಕೋರ್ಟ್ನ ಹಿರಿಯ ವಕೀಲರಾಗಿದ್ದ ಮಾಜಿ ಶಾಸಕ ಅಜ್ಜಿಕುಟ್ಟೀರ ಕಾರ್ಯಪ್ಪ ಸುಬ್ಬಯ್ಯ (86) ಅವರು ಇಂದು ನಿಧನರಾದರು. ಮೂಲತಃ ವೀರಾಜಪೇಟೆ ತಾಲೂಕಿನ ಹುದಿಕೇರಿ ಸಮೀಪದ ಬೆಳ್ಳೂರಿನವರಾದ ಸುಬ್ಬಯ್ಯ ಕೆಲ ತಿಂಗಳುಗಳಿಂದ ತಮ್ಮ ವಯೋಸಹಜ ಅನಾರೋಗ್ಯದಿಂದಾಗಿ ಬಳಲುತ್ತಿದ್ದರು. ಎ.ಕೆ.ಸುಬ್ಬಯ್ಯ ಅವರನ್ನು ತಾ. 10ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತಜ್ಞವೈದ್ಯರ ತಂಡ ನಿರಂತರವಾಗಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಂದು ಮಧ್ಯಾಹ್ನ ನಿಧನರಾದರು.
ಮೃತರ ಪಾರ್ಥಿವ ಶರೀರವನ್ನು ಬೆಂಗಳೂರಿನ ಆರ್.ಟಿ. ನಗರದ ಅವರ (ಮೊದಲ ಪುಟದಿಂದ) ಪ್ರಬುದ್ಧ ವಾಗ್ಮಿಯಾಗಿದ್ದ ಎ.ಕೆ. ಸುಬ್ಬಯ್ಯ ಅವರು ಪರಿಸ್ಥಿತಿಗೆ ತಕ್ಕಂತೆ ಮಾತನಾಡುವ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದರು. ಮಾತುಗಳು ಪರಿಸ್ಥಿತಿಯ ತೀವ್ರತೆಯನ್ನು ಬಿಂಬಿಸುವಂತಿರುತ್ತಿತ್ತು.
ಚಿಕ್ಕಂದಿನಿಂದಲೇ ರಾಜಕೀಯಕ್ಕೆ ಧುಮ್ಮುಕ್ಕಿದ್ದ ಸುಬ್ಬಯ್ಯ ನಿರರ್ಗಳವಾಗಿ ಮಾತನಾಡುತ್ತಿದ್ದರು. ಈ ಕಾರಣದಿಂದಲೇ ಹಿರಿಯ ನಾಯಕರಾಗಿದ್ದ ವಾಜಪೇಯಿ ಅವರೊಂದಿಗೆ ಸುಬ್ಬಯ್ಯನವರ ಒಡನಾಟ ಹೆಚ್ಚಾಯಿತು. ವಾಜಪೇಯಿ ಅವರು ಕರ್ನಾಟಕಕ್ಕೆ ಬಂದಾಗಲೆಲ್ಲಾ ಸುಬ್ಬಯ್ಯ ಅವರು ಜೊತೆಗಿರುತ್ತಿದ್ದರು. ವೀರಾಜಪೇಟೆಯಲ್ಲಿದ್ದ ಸುಬ್ಬಯ್ಯ ಅವರ ನಿವಾಸಕ್ಕೂ ವಾಜಪೇಯಿ ಅವರು ಭೇಟಿ ನೀಡಿದ್ದರು. ಬಳಿಕ ಬಿ.ಜೆ.ಪಿ.ಯಿಂದ ಹೊರಬಂದ ನಂತರ ಸುಬ್ಬಯ್ಯ ಅವರು ವಾಜಪೇಯಿ ಅವರೊಂದಿಗೆ ದೂರವಾಗಿದ್ದರು. ಜನತಾ ಪರಿವಾರದ ನಾಯಕರಾಗಿದ್ದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರೊಂದಿಗೂ ಉತ್ತಮ ಭಾಂಧವ್ಯ ಹೊಂದಿದ್ದ ಸುಬ್ಬಯ್ಯ ಅವರು, ದೇಸಾಯಿ ಅವರು ರಾಜ್ಯದಲ್ಲಿ ಪಾಲ್ಗೊಳ್ಳುತ್ತಿದ್ದ ಸಾರ್ವಜನಿಕ ಸಮಾರಂಭದಲ್ಲಿ ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸುತ್ತಿದ್ದರು. ದಿ. ರಾಜೀವ್ ಗಾಂಧಿ ಅವರೊಂದಿಗೂ ಸುಬ್ಬಯ್ಯ ಅವರಿಗೆ ನಿಕಟ ಸಂಪರ್ಕವಿತ್ತು. ಸುಬ್ಬಯ್ಯ ಅವರು ತಮ್ಮ ಕೊನೆ ಅವಧಿಯಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಕಾಂಗ್ರೆಸ್ನಿಂದ ಸ್ಫರ್ಧಿಸಿ ಆಯ್ಕೆಯಾಗುವಲ್ಲಿ ರಾಜೀವ್ ಗಾಂಧಿ ಅವರ ಸಹಕಾರವೂ ಇತ್ತು ಎನ್ನಲಾಗಿದೆ.
ಶಾಸಕರಾಗಿ ಸೇವೆ : ತಮ್ಮ 34ನೇ ವಯಸ್ಸಿನಲ್ಲಿಯೇ ಕರ್ನಾಟಕ ಶಾಸನ ಸಭೆಯಾಗಿರುವ ವಿಧಾನ ಪರಿಷತ್ತಿಗೆ ಪ್ರವೇಶಿಸಿದ ಎ.ಕೆ. ಸುಬ್ಬಯ್ಯ ಅವರ ರಾಜಕೀಯ ಬದುಕು 1968ರಲ್ಲಿ ಹೊಸ ತಿರುವು ಪಡೆದುಕೊಂಡಿತು. ಅಂದಿನ ಕೊಡಗು, ಮಂಗಳೂರು ಮತ್ತು ಮೈಸೂರು ಪ್ರಾಂತ್ಯವನ್ನು ಒಳಗೊಂಡ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಗೊಂಡು ಕರ್ನಾಟಕ ವಿಧಾನ ಪರಿಷತ್ತಿಗೆ ಪ್ರವೇಶಿಸಿದ ಇವರು 1968ರಿಂದ ಕನ್ನಡ ನಾಡಿಗೆ ಪರಿಚಿತರಾಗತೊಡಗಿದರು. ವೀರಾಜಪೇಟೆಯ ‘ಸುಬ್ಬೆ ಲಾಯರ್” ವಿಧಾನಸೌದ ಪ್ರವೇಶಿಸುತ್ತಿದ್ದಂತೆ ‘ಟೈಗರ್ ಸುಬ್ಬಯ್ಯ’ ಆದರು. 1974ರಲ್ಲಿ ಈಶಾನ್ಯ ಪದವೀಧರರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಇವರು ಮತ್ತೊಮ್ಮೆ ಜಯಭೇರಿ ಬಾರಿಸಿ 2ನೇ ಬಾರಿಗೆ ಪರಿಷತ್ ಪ್ರವೇಶಿಸಿದರು. ಈ ಅವಧಿಯ 1978ರಿಂದ 1980ರವರೆಗೆ ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ನಡೆದ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿದ ಎ.ಕೆ. ಸುಬ್ಬಯ್ಯ ಅವರು ಸತತವಾಗಿ 3 ಬಾರಿ ಗೆದ್ದು ಹ್ಯಾಟ್ರೀಕ್ ಸಾಧನೆಯೊಂದಿಗೆ ವಿಧಾನ ಪರಿಷತ್ ಅನ್ನು ಮರು ಪ್ರವೇಶಿಸಿದರು.
1988ರಲ್ಲಿ ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಗೊಂಡು 1994ರವರೆಗೆ ಶಾಸಕರಾಗಿದ್ದರು. ಹೀಗೆ ರಾಜಕೀಯ ಇತಿಹಾಸದಲ್ಲಿ ದಾಖಲೆಯೆಂಬಂತೆ 24 ವರ್ಷಗಳ ಕಾಲ ವಿಧಾನ ಪರಿಷತ್ತಿನಲ್ಲಿದ್ದ ಎ.ಕೆ. ಸುಬ್ಬಯ್ಯ ಅವರು ಕೆಲವು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲನ್ನೂ ಅನುಭವಿಸಿದ್ದರು. ವಿಧಾನ ಪರಿಷತ್ತಿನಲ್ಲಿ ಭ್ರಷ್ಟರಿಗೆ ಸಿಂಹಸ್ವಪ್ನರಾಗಿದ್ದ ಇವರು ಹಲವು ಭ್ರಷ್ಟರ ವಿರುದ್ಧ ಸಮರ ಸಾರಿದ್ದರು.
ಜನಸಂಘದ ಮೂಲಕ ಬೆಳೆದು ಬಂದು ನಂತರ ಭಾರತೀಯ ಜನತಾ ಪಕ್ಷಕ್ಕೆ ಇಡೀ ರಾಜ್ಯದಲ್ಲಿ ಬುನಾದಿ ಕಲ್ಪಿಸುವಲ್ಲಿ ಎ.ಕೆ. ಸುಬ್ಬಯ್ಯ ಅವರ ಪಾತ್ರ ಅತೀ ಮಹತ್ವದ್ದಾಗಿತ್ತು ಇವರು ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದ ವೇಳೆ 1984ರಲ್ಲಿ ಚುನಾವಣೆಯೊಂದು ಎದುರಾದಾಗ ಇಡೀ ಕರ್ನಾಟಕದಲ್ಲಿ ಪ್ರಚಾರ ಪ್ರವಾಸ ಮಾಡಿ ರಾಜ್ಯ ವಿಧಾನಸಭೆಗೆ ಇಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ದಿ. ವಿ.ಎಸ್. ಆಚಾರ್ಯ ಸೇರಿದಂತೆ 18 ಬಿಜೆಪಿ ಸದಸ್ಯರನ್ನು ಪ್ರಥಮ ಬಾರಿಗೆ ಪ್ರವೇಶಿಸುವಂತೆ ಮಾಡಿದ ಕೀರ್ತಿ ಸುಬ್ಬಯ್ಯ ಅವರದ್ದು. ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರ ರಚನೆಯಾಗಲು ಎ.ಕೆ. ಸುಬ್ಬಯ್ಯ ಅವರ ಪಾತ್ರ ಪ್ರಮುಖವಾಗಿತ್ತು. ಸರಕಾರ ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಅದನ್ನು ಖಂಡಿಸಿ, ಟೀಕಿಸುವ ಹಕ್ಕನ್ನು ಕಾಯ್ದಿರಿಸಿಕೊಂಡೇ ಸರಕಾರಕ್ಕೆ 18 ಶಾಸಕರ ಬಾಹ್ಯ ಬೆಂಬಲ ಘೋಷಿಸಲು ಸುಬ್ಬಯ್ಯ ತೀರ್ಮಾನಿಸಿದರು. ಒಂದು ಕಾಲದಲ್ಲಿ ಬಿ.ಜೆ.ಪಿ.ಯನ್ನು ಕಟ್ಟಿ ಬೆಳೆಸಿದ ಎ.ಕೆ. ಸುಬ್ಬಯ್ಯ ಅವರು ನಂತರದ ದಿನಗಳಲ್ಲಿ ಪೂರ್ಣ ಬದಲಾವಣೆಯಾಗಿ ಬಿ.ಜೆ.ಪಿ.ಯ ಕಡು ವೈರಿಯಾದರು. ಬಿ.ಜೆ.ಪಿ. ಮತ್ತು ಸಂಘ ಪರಿವಾರದ ವಿರುದ್ಧ ನಾಡಿನಾದ್ಯಂತ ದೊಡ್ಡ ಚಳುವಳಿಯನ್ನೇ ನಡೆಸಿದ್ದರು.
18 ತಿಂಗಳ ಜೈಲುವಾಸ: 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ಬಂಧನಕ್ಕೆ ಒಳಗಾದ ಎ.ಕೆ. ಸುಬ್ಬಯ್ಯ ಅವರು 18 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು. ಈ ವೇಳೆ ಎಲ್.ಕೆ. ಅಡ್ವಾಣಿ ಸೇರಿದಂತೆ ಹಲವು ಮುಖಂಡರೊಂದಿಗೆ ಕೆಲವು ತಿಂಗಳು ಇವರು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದರು. ತುರ್ತು ಪರಿಸ್ಥಿತಿ ಜಾರಿಯಾದ ಸಂದರ್ಭದಲ್ಲಿ ಮೊದಲಿಗೆ ಬಂಧಿಸಲ್ಪಟ್ಟ ಸುಬ್ಬಯ್ಯ ಅವರು ಅವಧಿಯ ಕೊನೆಯಲ್ಲಿ ಬಿಡುಗಡೆ ಹೊಂದಿದ್ದರು.
ಮಾತುಗಾರರಾಗಿದ್ದ ಎ.ಕೆ. ಸುಬ್ಬಯ್ಯ ಉತ್ತಮ ಬರಹಗಾರರೂ ಆಗಿದ್ದರು. ತಮ್ಮ ಸೈದಾಂತಿಕ ನಿಲುವಿನ ಬರಹಗಳಿಂದ ಪ್ರಕಟಗೊಂಡ ‘ಆರ್.ಎಸ್.ಎಸ್. ಅಂತರಂಗ’ ಇವರ ಮೊದಲ ಕೃತಿಯಾಗಿದೆ. ಎ.ಕೆ. ಸುಬ್ಬಯ್ಯ ಅವರ ಸಮಗ್ರ ಬರಹಗಳ ಗ್ರಂಥ ‘ಸೌಹಾರ್ದ ಸೆಲೆ’ ಮತ್ತು ’ದೇವರು ಮತ್ತು ಧರ್ಮ’ ಕಳೆದ ವರ್ಷ ಬಿಡುಗಡೆಯಾಗಿತ್ತು. ಅಲ್ಲದೆ ವಿವಿಧ ದಿನಪತ್ರಿಕೆ ಮತ್ತು ವಾರಪತ್ರಿಕೆಗಳಿಗೆ ವರ್ತಮಾನದ ವಿಶ್ಲೇಷಣೆಗಳುಳ್ಳ ಲೇಖನಗಳನ್ನು ನಿರಂತರವಾಗಿ ಬರೆಯುತ್ತಿದ್ದರು. ಜೊತೆಗೆ ಪುಸ್ತಕಗಳನ್ನು ಓದುವ ಹವ್ಯಾಸವಿದ್ದ ಇವರು ಸಾಕಷ್ಟು ಪುಸ್ತಕಗಳನ್ನು ತಮ್ಮ ಬಳಿ ಸಂಗ್ರಹಿಸಿದ್ದರು. ವೀರಾಜಪೇಟೆಯಿಂದ ಈ ಹಿಂದೆ ಪ್ರಕಟಗೊಳ್ಳುತ್ತಿದ್ದ ಹಿತವಾಣಿ ದಿನ ಪತ್ರಿಕೆ ಸಂಪಾದಕರಾಗಿಯೂ ಕೆಲಸ ಮಾಡಿದ್ದರು.
ಸಂಘ ಪರಿವಾರದ ಚಿಂತನೆಗಳೊಂದಿಗೆ ಬೆಳೆದು ಬಂದ ಎ.ಕೆ.ಸುಬ್ಬಯ್ಯ, ಬಿ.ಜೆ.ಪಿ. ಬಿಟ್ಟು ಹೊರಬಂದ ಕೆಲ ಸಮಯದಲ್ಲೇ ಎಡಪಂಥೀಯ ಚಿಂತನೆಗಳನ್ನು ಮೈಗೂಡಿಸಿಕೊಂಡು ಸ್ವತಂತ್ರ ಚಿಂತಕರಾಗಿ ಮುಂದುವರೆದರು. ಜಾತ್ಯತೀತ ತತ್ವಗಳಲ್ಲಿ ಬಲವಾಗಿ ನಂಬಿಕೆಹೊಂದಿದ್ದ ಎ.ಕೆ.ಎಸ್., ರಾಜ್ಯದ ಪ್ರಖರ ವಿಚಾರವಾದಿಗಳ ಸಾಲಿನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದರು.
ನಡೆದು ಬಂದ ಹಾದಿ : ಅಜ್ಜಿಕುಟ್ಟೀರ ಕಾರ್ಯಪ್ಪ ಮತ್ತು ಚಿಣ್ಣವ್ವ ದಂಪತಿಗಳ ಏಕಮಾತ್ರ ಪುತ್ರರಾಗಿ 1934ರ ಆಗಸ್ಟ್ 9ರಂದು ಹುದಿಕೇರಿ ಸಮೀಪದ ಕೋಣಗೇರಿಯಲ್ಲಿ ಜನಿಸಿದ ಎ.ಕೆ. ಸುಬ್ಬಯ್ಯ ಹರಿಹರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ನಂತರ ಆಗಿನ ಸೆಕೆಂಡರಿ ಶಿಕ್ಷಣವನ್ನು ಟಿ. ಶೆಟ್ಟಿಗೇರಿಯ ಸರ್ಕಾರಿ ಶಾಲೆಯಲ್ಲಿ ಪೂರೈಸಿದ ಇವರು, ಎಸ್.ಎಸ್.ಎಲ್.ಸಿ. ಶಿಕ್ಷಣವನ್ನು ಹುದಿಕೇರಿಯ ಜನತಾ ಪ್ರೌಢಶಾಲೆಯಲ್ಲಿ ಪಡೆದರು. ನಂತರ ಮಡಿಕೇರಿಯ ಆಗಿನ ಸರಕಾರಿ ಪದವಿ ಕಾಲೇಜಿನಲ್ಲಿ (ಈಗಿನ ಎಫ್.ಎಂ.ಸಿ ಕಾಲೇಜು) ಬಿಎಸ್ಸಿ ಪದವಿಯನ್ನು ಗಳಿಸಿದರು.
1963 ಮೈಸೂರಿನ ಶಾರದ ವಿಲಾಸ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರೂ 1964ರಿಂದಲೇ ವೀರಾಜಪೇಟೆಯಲ್ಲಿ ವಕೀಲ ವೃತ್ತಿ ಆರಂಭಿಸಿದರು. ವಕೀಲರಾಗಿದ್ದಾಗಲೇ ರಾಜಕೀಯದತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ತಮ್ಮ 18ನೇ ವಯಸ್ಸಿನಲ್ಲೇ ರಾಜಕಾರಣದತ್ತ ಒಲವು ತೋರಿದರು.
ವೀರಾಜಪೇಟೆಯ ಹೆಸರಾಂತ ವಕೀಲರಾಗಿದ್ದ ಚಿಯಕಪೂವಂಡ ಭೀಮಯ್ಯ ಮತ್ತು ಸೀತಮ್ಮ ದಂಪತಿಗಳ ಪುತ್ರಿ ಡಾಟಿ ಪೆÇನ್ನಮ್ಮ ಅವರನ್ನು 1964ರಲ್ಲಿ ವಿವಾಹವಾದ ಎ.ಕೆ. ಸುಬ್ಬಯ್ಯನವರಿಗೆ ಐವರು ಗಂಡು ಮಕ್ಕಳಿದ್ದಾರೆ.
ಕ್ಯಾನ್ಸರ್ ಅನ್ನು ಮಣಿಸಿದ್ದ ಸುಬ್ಬಯ್ಯ : ಸದಾ ಅರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದ ಸುಬ್ಬಯ್ಯ ಅವರಿಗೆ ಕಳೆದ 7 ವರ್ಷಗಳ ಹಿಂದೆ ತಮ್ಮ ಗಂಟಲಿನಲ್ಲಿ ಕ್ಯಾನ್ಸರ್ ಉಂಟಾಗಿ ಅದು 3ನೇ ಹಂತಕ್ಕೆ ಬಂದಾಗ ಕಾಯಿಲೆ ಬೆಳಕಿಗೆ ಬಂತು. ಈ ವೇಳೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಸುಬ್ಬಯ್ಯ ಅವರು ಕ್ಯಾನ್ಸರ್ನಿಂದ ಪೂರ್ಣವಾಗಿ ಗುಣಮುಖರಾಗಿ ಮತ್ತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಿದ್ದರು. ಕೆಲವೊಮ್ಮೆ ವಿರೋಧಿಗಳನ್ನು, ನ್ಯಾಯಾಲಯದಲ್ಲಿ ಎದುರಾಳಿ ವಕೀಲರನ್ನು ಮಣಿಸುತ್ತಿದ್ದಂತೆ ತಮ್ಮನ್ನು ಅಪ್ಪಿಕೊಂಡಿದ್ದ ಮಹಾಮಾರಿ ಕ್ಯಾನ್ಸರ್ ಅನ್ನು ಮಣಿಸಿದ್ದು ಗಮನಾರ್ಹವಾಗಿತ್ತು.
ಸಂತಾಪ : ಎ.ಕೆ. ಸುಬ್ಬಯ್ಯ ಅವರ ನಿಧನಕ್ಕೆ ಶಾಸಕ ಅಪ್ಪಚ್ಚು ರಂಜನ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಕುಮಾರ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ವಕ್ತಾರ ಟಾಟು ಮೊಣ್ಣಪ್ಪ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ಪಿಎಫ್ಐ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಷ, ಶಾಸಕ ಕೆ.ಜಿ. ಬೋಪಯ್ಯ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ರೆಹಮಾನ್, ಜಿ.ಪಂ. ಸದಸ್ಯೆ ಎಂ.ಬಿ. ಸುನಿತಾ ಮಂಜುನಾಥ್ ಸಂತಾಪ ಸೂಚಿಸಿದ್ದಾರೆ. ಚೇಂಬರ್ ಆಫ್ ಕಾಮರ್ಸ್ ಸಂತಾಪ ವ್ಯಕ್ತಪಡಿಸಿದೆ.
ಶ್ರದ್ಧಾಂಜಲಿ: ಎ.ಕೆ.ಸುಬ್ಬಯ್ಯ ಅವರ ನಿಧನ ಹಿನ್ನಲೆಯಲ್ಲಿ ಅಭಿಮಾನಿ ಬಳಗದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಪ್ರವಾಸಿ ಮಂದಿರದ ಆವರಣದಲ್ಲಿ ಎ.ಕೆ.ಸುಬ್ಬಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು. ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಪ್ರಮುಖರಾದ ಎಂ.ಇ.ಮೊಯಿದ್ದೀನ್, ಫಜಲುಲ್ಲಾ, ನಂಜುಂಡಸ್ವಾಮಿ, ಕೆ.ಎಸ್.ಮಹೇಶ್, ಕೆ.ಬಿ.ರಾಜು ಮತ್ತಿತರರು ಇದ್ದರು.
ಅಂತಿಮ ದರ್ಶನ
ಬೆಂಗಳೂರಿನಲ್ಲಿ ನಿಧನರಾದ ಎ.ಕೆ. ಸುಬ್ಬಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಹಲವು ಗಣ್ಯರು ಅಂತಿಮ ದರ್ಶನ ಪಡೆದರು. ಮಾಜಿ ವಿಧಾನಸಭಾಧ್ಯಕ್ಷರಾದ ಕೆ.ಆರ್. ರಮೇಶ್ಕುಮಾರ್, ಕೆ.ಆರ್.ಪೇಟೆ ಕೃಷ್ಣ, ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ನೆ.ಲಾ. ನರೇಂದ್ರ ಬಾಬು, ಬೈರತಿ ಬಸವರಾಜು, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಹೋರಾಟಗಾರ ದೊರೆಸ್ವಾಮಿ ಅಯ್ಯಂಗಾರ್, ಐಪಿಎಸ್ ಅಧಿಕಾರಿಗಳಾದ ಸುನಿಲ್ ಕುಮಾರ್, ಸಂದೀಪ್ ಪಾಟೀಲ್, ಶಶಿಕುಮಾರ್, ಮಾಜಿ ಸಚಿವೆ ಸುಮಾ ವಸಂತ್, ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಪಿ. ಬೋಪಯ್ಯ, ಮಾಜಿ ಶಾಸಕ ಹೆಚ್.ಡಿ. ಬಸವರಾಜು, ಡಿ.ಬಿ. ಚಂದ್ರೇಗೌಡ, ನಿಡುಮಾಮಿಡಿ ಸ್ವಾಮೀಜಿ, ಹಿರಿಯ ವಕೀಲ ಚಂದ್ರಮೌಳಿ, ಮಾಜಿ ಸಚಿವ ಕೃಷ್ಣ ಬೈರೇಗೌಡ, ಮಾಜಿ ಸಚಿವ ಬಿ.ಎಲ್. ಶಂಕರ್ ಹಲವು ನ್ಯಾಯಾಧೀಶರುಗಳಲ್ಲದೆ ಇತರರು ಹಿರಿಯರಿಗೆ ಗೌರವ ಸಲ್ಲಿಸಿದರು.
- ರಫೀಕ್ ತೂಚಮಕೇರಿ