ಗೋಣಿಕೊಪ್ಪ ವರದಿ, ಆ. 27 : ಸ್ಥಳೀಯ ಶಾಸಕ ಕೆ. ಜಿ. ಬೋಪಯ್ಯ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದು ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಒತ್ತಾಯಿಸಿದ್ದಾರೆ.

ಸ್ಥಳೀಯವಾಗಿ ಅಭಿವೃದ್ಧಿ ಸಾಧಿಸಲು ಸ್ಥಳಿಯರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಬೇಕು. ಈ ನಿಟ್ಟಿನಲ್ಲಿ ಬೋಪಯ್ಯ ಅವರನ್ನು ಸಚಿವರಾಗಿ ಆಯ್ಕೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೊಡಗಿನ ಬೌಗೋಳಿಕ, ಜಮ್ಮಬಾಣೆ ವಿಚಾರದಲ್ಲಿ ಹೊರಗಿನ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ಇಲ್ಲ. ಇದರಿಂದಾಗಿ ಬೋಪಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕಿದೆ. ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಸಂದರ್ಭ ಬೋಪಯ್ಯ ಅವರ ಅಭಿವೃದ್ಧಿ ಚಿಂತನೆಯಲ್ಲಿ ಹೆಚ್ಚು ಅಭಿವೃದ್ಧಿ ಕಂಡಿದೆ. ಶಿಸ್ತಿನ ವ್ಯಕ್ತಿಯಾಗಿ ಸಂಘ ಪರಿವಾರದ ಮೂಲಕ ಗುರುತಿಸಿಕೊಂಡು ಪಕ್ಷಕ್ಕೂ ಹೆಚ್ಚು ದುಡಿದಿದ್ದಾರೆ. ಇದನ್ನು ಮನಗಂಡು ಪಕ್ಷದ ವರಿಷ್ಠರು ಉತ್ತಮ ಆಡಳಿತ ನೀಡಲು ಅವಕಾಶ ನೀಡಬೇಕು ಎಂದರು.

ಧನಂಜಯ್‍ಕುಮಾರ್ ಸಂಸದರಾಗಿ ಆಯ್ಕೆಯಾಗಲು ಕೊಡಗು ಬಿಜೆಪಿ ಕಾಣಿಕೆ ಹೆಚ್ಚಿದೆ. ಇವುಗಳನ್ನು ವರಿಷ್ಠರು ಪರಿಗಣನೆಗೆ ತೆಗೆದುಕೊಳ್ಳಬೇಕಿದೆ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಘು ನಾಣಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಕೆ. ಬೋಪಣ್ಣ, ಶಶಿ ಸುಬ್ರಮಣಿ, ಭವ್ಯ ಉಪಸ್ಥಿತರಿದ್ದರು.

ಬಿಜೆಪಿ ವರಿಷ್ಠರ ಕಾಂಗ್ರೆಸ್ ಮುಕ್ತ ಭಾರತ ಕನಸ್ಸಿಗೆ ಪೂರಕವಾಗಿ ಮುನ್ನಡೆಯುತ್ತಿರುವದನ್ನು ಪರಿಗಣಿಸಿ ಕೊಡಗು ಜಿಲ್ಲೆಯ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ. ಜಿ. ಬೋಪಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಆದೇಂಗಡ ವಿನು ಚಂಗಪ್ಪ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರಧಾನಿ ಮೋದಿ, ಅಮಿತ್‍ಶಾ ಅವರ ಕನಸ್ಸಿನಂತೆ ಇಲ್ಲಿ ಬಿಜೆಪಿ ಅಧಿಕಾರ ಪಡೆದುಕೊಂಡಿದೆ. ಜಿಲ್ಲೆಯ ಶಾಸಕ ಸ್ಥಾನ, ಸಂಸದ ಸ್ಥಾನ, ಸ್ಥಳೀಯ ಆಡಳಿತ ಕೂಡ ಬಿಜೆಪಿ ಪಾಲಾಗಿದೆ. ಇದಕ್ಕೆಲ್ಲಾ ಸ್ಥಳೀಯ ಕಾರ್ಯಕರ್ತರುಗಳು, ಮುಖಂಡರುಗಳು, ಸಂಘ ಪರಿವಾರ ಕೂಡ ಕಾರಣ. ಶಾಸಕರು ಕೂಡ ಪಕ್ಷಕ್ಕೆ ತಮ್ಮದೇ ಕಾಣಿಕೆ ನೀಡುತ್ತಿದ್ದು, ಸಚಿವ ಸ್ಥಾನ ನೀಡುವ ಮೂಲಕ ಮತ್ತಷ್ಟು ಪಕ್ಷ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ವರಿಷ್ಠರು ಮುಂದಾಗಬೇಕಿದೆ ಎಂದರು.

ಮಂತ್ರಿ ಸ್ಥಾನ ನೀಡದಿರುವದು ದುಃಖದ ವಿಚಾರವಾಗಿದ್ದು, ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕಿದೆ ಎಂದರು. ಕ್ಷೇತ್ರದ ಅಭಿವೃದ್ಧಿಗೆ ಸ್ಥಳೀಯ ಶಾಸಕರು ಇಲ್ಲಿವರೆಗೆ ದುಡಿದಿರುವುÀನ್ನು ಗೌರವಿಸಬೇಕಿದೆ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಗಿರೀಶ್ ಗಣಪತಿ, ಶ್ಯಾಂ ಪೂಣಚ್ಚ, ಜಪ್ಪು ಸುಬ್ಬಯ್ಯ ಉಪಸ್ಥಿತರಿದ್ದರು.