ಮಡಿಕೇರಿ, ಆ. 27: ಖ್ಯಾತ ಲೇಖಕ ಹಾಗೂ ರಾಷ್ಟ್ರೀಯ ವಿಚಾರಧಾರೆಗಳ ಪ್ರತಿಪಾದಕ ಮಾಣಿಪಂಡ ಸಂತೋಷ್ ತಮ್ಮಯ್ಯ ಅವರು ಸೇನಾನಿಗಳನ್ನು ಸಂದರ್ಶನ ಮಾಡಿ ರಚಿಸಿರುವ ‘ಸಮರ ಭೈರವಿ’ ಕೃತಿಯ ಬಿಡುಗಡೆ ಸಮಾರಂಭ ತಾ. 28 (ಇಂದು) ನಗರದ ಕೊಡವ ಸಮಾಜದಲ್ಲಿ ನಡೆಯಲಿದೆ.
ಪ್ರಜ್ಞಾ ಕಾವೇರಿ, ಮಡಿಕೇರಿ ಹಾಗೂ ಅಖಿಲ ಭಾರತಿಯ ಸಾಹಿತ್ಯ ಪರಿಷತ್‍ನ ಕೊಡಗು ಘಟಕದ ವತಿಯಿಂದ ಸಂಜೆ 5.30ಕ್ಕೆ ಕಾರ್ಯಕ್ರಮ ಜರುಗಲಿದೆ ಎಂದು ಕಾರ್ಯಕ್ರಮದ ಸಂಯೋಜಕ, ಪ್ರಜ್ಞಾಕಾವೇರಿಯ ಕೆ.ಕೆ. ಮಹೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ-ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ, ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಅವರು ಪುಸ್ತಕ ಅನಾವರಣಗೊಳಿಸಲಿದ್ದು, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸುವರ್ಣ ನ್ಯೂಸ್‍ನ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮಂಡ್ಯದ ಸ್ತ್ರೀರೋಗ ತಜ್ಞ ಮತ್ತು ಶಸ್ತ್ರಚಿಕಿತ್ಸಕ ಡಾ. ಬಿ.ಕೆ. ಸುರೇಶ್ ಅವರು ಕೃತಿ ಪರಿಚಯ ಮಾಡಲಿದ್ದಾರೆ ಎಂದರು.
ಕೊಡಗು ಯೋಧರ ನಾಡಾಗಿದ್ದು, ಯೋಧ ಪರಂಪರೆ ಇಲ್ಲಿನ ಸಂಸ್ಕøತಿಯ ಭಾಗವಾಗಿದೆ. ಕೊಡಗಿನ ಬಹುತೇಕ ಮನೆಗಳಲ್ಲಿ ಒಬ್ಬ ಯೋಧನಿರುತ್ತಾನೆ. ಕೊಡಗಿನ ಹಲವಾರು ಸೈನಿಕರು ಭಾರತೀಯ ಸೇನೆಯ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಲ್ಲದೆ, ಹಲವಾರು ಶೌರ್ಯ ಪ್ರಶಸ್ತಿಗಳನ್ನೂ ಪಡೆದು ಕೊಂಡಿದ್ದಾರೆ. ಅಂತಹ ಮಹಾನ್ ಸೇನಾನಿಗಳನ್ನು ಸಂದರ್ಶನ ಮಾಡಿ ಸಂತೋಷ್ ಅವರು ಕಳೆದ ಎರಡೂವರೆ ವರ್ಷಗಳ ಸತತ ಪ್ರಯತ್ನದ ಮೂಲಕ ಸಮರ ಭೈರವಿ ಕೃತಿಯನ್ನು ರಚಿಸಿದ್ದಾರೆ ಎಂದು ಮಹೇಶ್‍ಕುಮಾರ್ ತಿಳಿಸಿದರು.
ಸಮರ ಭೈರವಿ ಕೃತಿಯನ್ನು ಈಗಾಗಲೇ ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಲಾಗಿದ್ದರೂ, ವೀರ ಪರಂಪರೆಗೆ ಹೆಸರಾದ ಕೊಡಗಿನಲ್ಲಿ ಅದನ್ನು ಮತ್ತೊಮ್ಮೆ ಅನಾವರಣಗೊಳಿಸುವ ಮೂಲಕ ಮುಂದಿನ ಪೀಳಿಗೆಗೆ ಯೋಧ ಪರಂಪರೆಯನ್ನು ಪರಿಚಯಿಸುವದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಂದರ್ಭ ಸಮರ ಭೈರವಿ ಕೃತಿಯನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆಯೂ ಇದೆ ಎಂದು ಮಹೇಶ್ ಕುಮಾರ್ ತಿಳಿಸಿದರು.
ಗೋಷ್ಠಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಂ.ಕೆ. ಜಯಕುಮಾರ್, ಪ್ರಜ್ಞಾ ಕಾವೇರಿಯ ಪ್ರಮುಖರಾದ ಚಂದ್ರ ಉಡೋತ್, ಬಿ.ಬಿ. ಮಹೇಶ್ ಹಾಗೂ ಟಿ.ಎ. ಕುಮಾರ್ ಉಪಸ್ಥಿತರಿದ್ದರು.
ಕೊಡಗಿನಲ್ಲಿ ಏಲಕ್ಕಿ ಬೆಳೆಯ ಪುನಶ್ಚೇತನಕ್ಕೆ ಸಂಬಾರ ಮಂಡಳಿಯಿಂದ ಕ್ರಮ
ಸೋಮವಾರಪೇಟೆ, ಆ. 27: ಹಿಂದೊಮ್ಮೆ ಅತೀ ಹೆಚ್ಚು ಏಲಕ್ಕಿ ಬೆಳೆಯುವ ಪ್ರದೇಶವಾಗಿದ್ದ ಕೊಡಗಿನಲ್ಲಿ ಇತ್ತೀಚೆಗೆ ಏಲಕ್ಕಿಯ ಬಗ್ಗೆ ಅನಾದರ ಕಂಡುಬರುತ್ತಿದೆ. ಬೆಲೆ ಕುಸಿತದಿಂದ ರೈತರು ಏಲಕ್ಕಿ ಬೆಳೆಯಿಂದ ವಿಮುಖರಾಗಿದ್ದು, ಇದೀಗ ಉತ್ತಮ ಬೆಲೆ ಇರುವ ಹಿನ್ನೆಲೆ ಕೊಡಗಿನಲ್ಲಿ ಮತ್ತೆ ಏಲಕ್ಕಿಗೆ ಪುನಶ್ಚೇತನ ನೀಡಲು ಸಂಬಾರ ಮಂಡಳಿ ಮುಂದಾಗಿದೆ ಎಂದು ಮಂಡಳಿಯ ಉಪ ನಿರ್ದೇಶಕ ಡಾ. ಸದಾ ನಾಯಕ್ ತಿಳಿಸಿದ್ದಾರೆ.
ಸಮೀಪದ ಐಗೂರು ಗ್ರಾಮದಲ್ಲಿರುವ ಸಂಬಾರ ಮಂಡಳಿಯ ಸಸ್ಯಕ್ಷೇತ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಐಗೂರಿನಲ್ಲಿ ಪ್ರಸಕ್ತ ವರ್ಷ 50 ಸಾವಿರ ಏಲಕ್ಕಿ ಗಿಡಗಳನ್ನು ಬೆಳೆಯಲಾಗಿದ್ದು, ಈಗಾಗಲೇ 45 ಸಾವಿರಕ್ಕೂ ಅಧಿಕ ಗಿಡಗಳನ್ನು ರೈತರಿಗೆ ವಿತರಿಸಲಾಗಿದೆ ಎಂದರು.
ಸಕಲೇಶಪುರದಲ್ಲಿ ಪ್ರಾದೇಶಿಕ ಕಚೇರಿ ಹೊಂದಿರುವ ಸಂಬಾರ ಮಂಡಳಿ ವ್ಯಾಪ್ತಿಗೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ವಿಭಾಗಗಳು ಒಳಪಡಲಿವೆ. ಈ ಮೂರು ಜಿಲ್ಲೆಗಳ ಒಟ್ಟಿಗೆ ಹಾಸನ ದಲ್ಲೂ ಏಲಕ್ಕಿ ಬೆಳೆಯಲಾಗುತ್ತಿದ್ದು, ಕೊಡಗು ಜಿಲ್ಲೆ ಏಲಕ್ಕಿ ಬೆಳೆಗೆ ಉತ್ತಮ ವಾತಾವರಣ ಹೊಂದಿದೆ.
ಕೊಡಗಿನ ಮಳೆ, ಉಷ್ಣಾಂಶ ಅನುಕೂಲಕರವಾಗಿದ್ದು, ಈ ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ಏಲಕ್ಕಿ ಬೆಳೆಗಾರರಿದ್ದರು. ನಡುವೆ ಏಲಕ್ಕಿ ಬೆಳೆಗಾರರ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದ್ದು, ಇದೀಗ ಬೆಳೆಗೆ ಬೇಡಿಕೆ ಹೆಚ್ಚಿರುವದರಿಂದ ಮತ್ತೆ ಏಲಕ್ಕಿಯತ್ತ ಬೆಳೆಗಾರರು ಮುಖ ಮಾಡುತ್ತಿದ್ದಾರೆ. ಅವರುಗಳ ಬೇಡಿಕೆಗೆ ತಕ್ಕಂತೆ ಸಂಬಾರ ಮಂಡಳಿಯೂ ಕೆಲಸ ಮಾಡಲು ಉತ್ಸುಕವಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ಸಾಲಿನ ಪ್ರಾಕೃತಿಕ ವಿಕೋಪದಿಂದ ಕೊಡಗಿನಲ್ಲಿ ಶೇ.40 ರಷ್ಟು ಏಲಕ್ಕಿ ಗಿಡಗಳು ನಾಶವಾಗಿದ್ದರೆ, ಶೇ. 60ರಷ್ಟು ಫಸಲು ನಷ್ಟವಾಗಿದೆ. ಈ ಬಗ್ಗೆ ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ಡಾ. ಸದಾ ನಾಯಕ್ ತಿಳಿಸಿದರು.
ಮಂಡಳಿಯ ವತಿಯಿಂದ ಐಗೂರು ಸೇರಿದಂತೆ ಬೆಳಗೊಳ, ಬಿಳಿಗೇರಿ, ಬೆಟ್ಟದಮನೆ, ಯಸಳೂರು ಭಾಗಗಳಲ್ಲಿ ನರ್ಸರಿ ಮಾಡಲಾಗುತ್ತಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಏಲಕ್ಕಿ ಸಸಿಗಳನ್ನು ಪೂರೈಕೆ ಮಾಡಲಾಗುತ್ತಿದೆ. ಪ್ರಸಕ್ತ ವರ್ಷದಿಂದ ಕೊಡಗು ಸೇರಿದಂತೆ ಇತರ ವಿಭಾಗೀಯ ಕಚೇರಿ ವ್ಯಾಪ್ತಿಯಲ್ಲಿ ಕಾಳುಮೆಣಸು, ಏಲಕ್ಕಿಯೊಂದಿಗೆ ಜಾಯಿಕಾಯಿ, ಜಾಪತ್ರೆ ಮತ್ತು ಲವಂಗ ಸಸಿಗಳನ್ನು ನರ್ಸರಿಯಲ್ಲಿ ಬೆಳೆದು ರೈತರಿಗೆ ವಿತರಿಸಲಾಗುವದು ಎಂದು ಮಾಹಿತಿ ಒದಗಿಸಿದರು.
ಐಗೂರು ಸಸ್ಯಕ್ಷೇತ್ರದಲ್ಲಿ ಕಾಳುಮೆಣಸಿನ ಸಸಿಗಳು ತಯಾರಾಗುತ್ತಿದ್ದು, ಸೆಪ್ಟೆಂಬರ್ ಮೊದಲ ವಾರದಿಂದ ರೈತರಿಗೆ ವಿತರಿಸಲಾಗುವದು ಎಂದ ಸದಾ ನಾಯಕ್ ಅವರು, ಏಲಕ್ಕಿ ಬೆಳೆಗೆ ಬಾಧಿಸುವ ಕೀಟ, ಶಿಲೀಂದ್ರಗಳ ನಿಯಂತ್ರಣಕ್ಕೆ ಸಂಶೋಧನೆಗಳು ನಡೆದು ಕೀಟ-ಶಿಲೀಂದ್ರ ನಾಶಕಗಳನ್ನು ಕಂಡುಹಿಡಿಯಲಾಗಿದೆ. ಇದರೊಂದಿಗೆ ಉತ್ತಮ ಗುಣಮಟ್ಟವನ್ನು ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಸಂಬಾರ ಮಂಡಳಿಯಿಂದ ರೈತರಿಗೆ ಮಾಹಿತಿ ನೀಡಲಾಗುವದು ಎಂದರು.
ಬೆಳೆಗಾರರು-ಮಂಡಳಿಯ ನಡುವೆ ಕೊಂಡಿಯಾಗಿ ಕೆಲಸ: ಉಪ ನಿರ್ದೇಶಕರೊಂದಿಗೆ ಕ್ಷೇತ್ರ ಭೇಟಿ ಮಾಡಿದ ಸಂಬಾರ ಮಂಡಳಿಯ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಈ ಹಿಂದೆ ಸೋಮವಾರಪೇಟೆಯ ಶಾಂತಳ್ಳಿ, ಗರ್ವಾಲೆ, ಸೂರ್ಲಬ್ಬಿ, ವೀರಾಜಪೇಟೆಯ ಬಿರುನಾಣಿ, ಮಡಿಕೇರಿಯ ಭಾಗಮಂಡಲ ಸೇರಿದಂತೆ ಇತರೆಡೆಗಳಲ್ಲಿ ಹೆಚ್ಚು ಏಲಕ್ಕಿ ಬೆಳೆಯಲಾಗುತ್ತಿತ್ತು. ಏಲಕ್ಕಿಯಿಂದಲೇ ಅನೇಕ ಬೆಳೆಗಾರರು ಜೀವನ ಕಂಡುಕೊಂಡಿದ್ದರು. ಆದರೆ ಬೆಳೆ ಇಳಿಕೆಯಾದಂತೆ ಏಲಕ್ಕಿ ಬೆಳೆಗಾರರೂ ಇಲ್ಲವಾಗಿದ್ದು, ಇದೀಗ ಬೆಲೆ ಏರಿಕೆಯಿಂದ ಮತ್ತೆ ಏಲಕ್ಕಿಯತ್ತ ಮುಖಮಾಡುತ್ತಿದ್ದಾರೆ. ಇಂತಹ ಬೆಳೆಗಾರರಿಗೆ ಸಂಬಾರ ಮಂಡಳಿ ಯಿಂದ ಎಲ್ಲಾ ರೀತಿಯ ಸೌಕರ್ಯ ಒದಗಿಸಲಾಗುವದು ಎಂದರು.
ಬೇರೆ ಬೆಲೆಗಳಿಗೆ ಹೋಲಿಸಿದರೆ ಏಲಕ್ಕಿಯಿಂದ ಹೆಚ್ಚು ಆದಾಯ ಲಭಿಸುತ್ತದೆ. ಏಲಕ್ಕಿ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿಯ ಅಗತ್ಯವಿದೆ. ಈ ಹಿನ್ನೆಲೆ ಪ್ರಥಮವಾಗಿ ಶಾಂತಳ್ಳಿಯಲ್ಲಿ ರೈತರಿಗೆ ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮ ಆಯೋಜಿಸ ಲಾಗುವದು ಎಂದು ತಿಳಿಸಿದರು.
ಕೊಡಗಿನಲ್ಲಿ 150 ಹೆಕ್ಟೇರ್ ಪ್ರದೇಶದಲ್ಲಿ ಏಲಕ್ಕಿ ಮರು ನಾಟಿ ಮಾಡುವ ಗುರಿ ಹೊಂದಲಾಗಿದ್ದು, 1 ಹೆಕ್ಟೇರ್‍ಗೆ ಸರ್ಕಾರದಿಂದ 50 ಸಾವಿರ ಸಹಾಯಧನ ನೀಡಲಾಗುವದು. ರೈತರು ತಮ್ಮ ಕಾಫಿ ತೋಟದ ನಡುವೆ ಕನಿಷ್ಟ 1 ಏಕರೆ ಏಲಕ್ಕಿ ಬೆಳೆಯಲು ಮುಂದಾಗಬೇಕು. ಇದರಿಂದ ರೂ. 20 ಸಾವಿರ ಸಬ್ಸಿಡಿ ಲಭಿಸಲಿದ್ದು, ಈ ಹಣದಿಂದಲೇ ಏಲಕ್ಕಿ ಬೆಳೆಯನ್ನು ಉಪಚರಿಸ ಬಹುದು ಎಂದು ಎಸ್.ಜಿ. ಮೇದಪ್ಪ ಸಲಹೆ ನೀಡಿದರು.
ಬೆಳೆಗಾರರು ಮತ್ತು ಸಂಬಾರ ಮಂಡಳಿಯ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಲಾಗುವದು. ಮಂಡಳಿಯ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಮೊ:9448005646 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಮೇದಪ್ಪ ತಿಳಿಸಿದರು.