ಮಡಿಕೇರಿ, ಆ. 26: ಗೌರಿ -ಗಣೇಶೋತ್ಸವ ಸಮೀಪದಲ್ಲಿದ್ದು, ಉತ್ಸವ ಆಚರಣೆಯಲ್ಲಿ ಗರಿಷ್ಠ 5 ಅಡಿಯ ಗಣಪತಿಯ ಮಣ್ಣಿನ ವಿಗ್ರಹಗಳನ್ನು ಮಾತ್ರ ತಯಾರಿಸಲು ಅನುಮತಿ ನೀಡುವಂತೆ ಪೌರಾಡಳಿತ ನಿರ್ದೇಶನಾಲಯ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.ಪ್ರಸಕ್ತ ಸಾಲಿನಲ್ಲಿ ಪರಿಸರ ಸ್ನೇಹಿ ಗೌರಿ - ಗಣೇಶ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮನವಿಯ ಹಿನ್ನೆಲೆಯಲ್ಲಿ ಗೌರಿ - ಗಣೇಶೋತ್ಸವ ಆಚರಣೆ ಸಂಬಂಧ ಹಲವಾರು ನಿಬಂಧನೆಗಳನ್ನು ವಿಧಿಸಿ ಪೌರಾಡಳಿತ ನಿರ್ದೇಶನಾಲಯ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಪತ್ರ ಬರೆದಿದ್ದು, ಸಾರಾಂಶ ಈ ಕೆಳಗಿನಂತಿದೆ:

ರಾಜ್ಯದಲ್ಲಿ ಜಲಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪಿ.ಓ.ಪಿ.ಯಿಂದ ಮಾಡುವ ವಿಗ್ರಹಗಳನ್ನು ಯಾವದೇ ಜಲಮೂಲಗಳಲ್ಲಿ ವಿಸರ್ಜನೆ ಮಾಡಲು ಅವಕಾಶ ನೀಡಬಾರದು. ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ವಿಸರ್ಜಿಸದೆ ಉಳಿದಿರುವ ಪಿ.ಓ.ಪಿ. ಅಥವಾ ಬಣ್ಣದ ವಿಗ್ರಹಗಳನ್ನು ಪತ್ತೆ ಹಚ್ಚಿ ಸುಪರ್ದಿಗೆ ತೆಗೆದುಕೊಂಡು ಅಂತಹ ವಸ್ತುಗಳನ್ನು ಸ್ಥಳೀಯ ಸಂಸ್ಥೆಯಲ್ಲಿ ಇರುವ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಾಗಿಸಿ (ಮೊದಲ ಪುಟದಿಂದ) ಶ್ರೆಡರ್‍ಗಳನ್ನು ಉಪಯೋಗಿಸಿಕೊಂಡು ಒಂದೇ ಸ್ಥಳದಲ್ಲಿ ಧಾರ್ಮಿಕ ವಿಧಿ- ವಿಧಾನಗಳಿಗೆ ಭಂಗವಾಗದಂತೆ ವಿಲೇವಾರಿ ಮಾಡಲು ಕ್ರಮವಹಿಸಬೇಕು. ರಾಜ್ಯದ ಜಿಲ್ಲೆ ಅಥವಾ ತಾಲೂಕುಗಳಿಗೆ ಬೇರೆ ರಾಜ್ಯದಿಂದ ಬರುವಂತಹ ಪಿ.ಓ.ಪಿ. ವಿಗ್ರಹಗಳನ್ನು ತಡೆಗಟ್ಟಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಅಂತಹ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ತೆಗೆದುಕೊಳ್ಳಬೇಕು.

ಪಿಓಪಿ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿ / ಸಂಸ್ಥೆಗಳಿಗೆ ವ್ಯಾಪಾರದ ಪರವಾನಗಿ ನೀಡಬಾರದು ಮತ್ತು ಪರವಾನಗಿ ಪಡೆಯದೇ ಅನಧಿಕೃತವಾಗಿ ತಯಾರಿಸಿ/ ಮಾರಾಟ ಮಾಡುವ ವ್ಯಕ್ತಿ/ ಸಂಸ್ಥೆಗಳ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬೇಕು. ಗೌರಿ - ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಬಣ್ಣರಹಿತ ಮಣ್ಣಿನ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ ತದನಂತರ ಸ್ಥಳೀಯ ಸಂಸ್ಥೆಗಳು ನಿಗಧಿಪಡಿಸಿರುವ ಸ್ಥಳಗಳಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸಲು ಸೂಚಿಸಬೇಕು.

ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಮೊಬೈಲ್ ಟ್ಯಾಂಕ್‍ಗಳಲ್ಲಿ / ಕಲ್ಯಾಣಿಗಳಲ್ಲಿ ಹಸಿಕಸ (ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ, ಇತ್ಯಾದಿ) ಸಹಿತ ಮೂರ್ತಿಗಳನ್ನು ನೀರಿಗೆ ವಿಸರ್ಜಿಸದೆ, ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಕ್ರಮವಹಿಸುವಂತೆ ನಿರ್ದೇಶನ ನೀಡಬೇಕು. ವಾರ್ಡ್ ಮಟ್ಟದಲ್ಲಿ ಪೊಲೀಸರ ಸಹಯೋಗದೊಂದಿಗೆ ಸಮಿತಿಯನ್ನು ರಚಿಸಿ ಗಣೇಶ ವಿಗ್ರಹಗಳ ಸೂಕ್ತ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು.

ಗರಿಷ್ಠ 5 ಅಡಿ ಎತ್ತರದ ಮಣ್ಣಿನ ವಿಗ್ರಹಗಳನ್ನು ಮಾತ್ರ ತಯಾರಿಸಲು ಅನುಮತಿ ನೀಡುವದು. (ಮೂರ್ತಿಗಳ ಸರಾಸರಿ ತೂಕ, ಬಿರುಕು ಸಾಗಾಣಿಕೆ ಹಾಗೂ ತ್ಯಾಜ್ಯ ಉತ್ಪನ್ನ ಪರಿಗಣಿಸಿ ಈ ಕ್ರಮ ಶಿಫಾರಸ್ಸು ಮಾಡಲಾಗಿದೆ)

ನಿರ್ದಿಷ್ಟ ಪ್ರದೇಶದಲ್ಲಿ ಸ್ಥಾಪಿಸಲಾಗುವ ಸಾರ್ವಜನಿಕ ಗಣಪತಿಗಳನ್ನು ವಿಲೇವಾರಿ ಮಾಡಲು ನಿರ್ದಿಷ್ಟ ಜಲಮೂಲಗಳನ್ನು ನಿಗಧಿಪಡಿಸಿ ಈ ಬಗ್ಗೆ ಸೂಕ್ತ ಪ್ರಕಟಣೆಯನ್ನು ಹೊರಡಿಸಬೇಕು. ಶಾಲಾ - ಕಾಲೇಜುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ಲ್ಯಾಸ್ಟರ್ ಆಫ್ ಪ್ಯಾರಿಸ್‍ನಿಂದ ತಯಾರಿಸಿದ ಬಣ್ಣ ಲೇಪಿತ ವಿಗ್ರಹಗಳನ್ನು ಕೆರೆ ಮತ್ತು ಇತರೆ ಜಲಮೂಲಗಳಲ್ಲಿ ವಿಸರ್ಜನೆ ಮಾಡಿದಲ್ಲಿ ಬಣ್ಣ ಲೇಪಿತ ವಿಗ್ರಹಗಳ ವಿಷಕಾರಿ ಅಂಶಗಳು ನೀರಿನ ಜೊತೆಗೆ ಸೇರಿ ಕಲುಷಿತವಾಗುವ ಎಲ್ಲಾ ಸಾಧ್ಯತೆಗಳಿದ್ದು, ಇದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು.

ಈ ಮೇಲೆ ತಿಳಿಸಿರುವ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ, ಪಾಲಿಕೆಯ ಆಯುಕ್ತರು, ಆರೋಗ್ಯಾಧಿಕಾರಿಗಳು ಹಾಗೂ ಪರಿಸರ ಅಭಿಯಂತರರನ್ನೊಳಗೊಂಡ ಸಮಿತಿಯನ್ನು ರಚಿಸಬೇಕು ಹಾಗೂ ನಗರಸಭೆ / ಪುರಸಭೆ / ಪ.ಪಂ. ಮಟ್ಟದಲ್ಲಿ ಆಯುಕ್ತರ ಅಧ್ಯಕ್ಷತೆಯಲ್ಲಿ ಡಿವೈಎಸ್ಪಿ, ವೃತ್ತ ನಿರೀಕ್ಷಕರು, ಸಂಬಂಧಪಟ್ಟ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ, ಪರಿಸರ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಕರು ಅವರನ್ನೊಳಗೊಂಡ ಸಮಿತಿ ರಚಿಸಿ ಮೇಲ್ವಿಚಾರಣೆ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.