ಮಡಿಕೇರಿ, ಆ. 26: ಇನ್ನೇನು ಕೆಲವೇ ದಿನಗಳಲ್ಲಿ ಗೌರಿ ಗಣೇಶೋತ್ಸವ ಆಚರಣೆ ನಡೆಯಲಿದ್ದು; ಉತ್ಸವವನ್ನು ಶ್ರದ್ಧಾ ಭಕ್ತಿಯೊಂದಿಗೆ ಶಾಂತಿಯುತವಾಗಿ ಆಚರಿಸುವಂತೆ ಉತ್ಸವ ಸಮಿತಿಗಳಿಗೆ ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಸೂಚನೆ ನೀಡಿದರು.
ನಗರ ಠಾಣೆಯಲ್ಲಿಂದು ಗಣೇಶೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಗಣಪತಿ ಉತ್ಸವ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಗಣಪತಿ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಭದ್ರತೆಗಾಗಿ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಬೇಕು. ಪ್ರತಿಷ್ಠಾಪನೆ ಸ್ಥಳ, ಎಷ್ಟು ದಿನ ಆಚರಣೆ, ವಿಸರ್ಜನಾ ಮೆರವಣಿಗೆಯ ಮಾರ್ಗ ಮತ್ತಿತರ ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡಬೇಕು. ವಿದ್ಯುತ್ ಬಳಕೆ ಸಂಬಂಧ ಸೆಸ್ಕ್‍ನಿಂದ ಅನುಮತಿ ಪಡೆಯಬೇಕು, ರಾತ್ರಿ ವೇಳೆ ಪ್ರತಿಷ್ಠಾಪನಾ ಸ್ಥಳದಲ್ಲಿ ಸಮಿತಿ ಸದಸ್ಯರು ಹಾಜರಿರಬೇಕು, ಯಾವದೇ ತೊಂದರೆಗಳಾಗದ ರೀತಿಯಲ್ಲಿ ಗಮನ ಹರಿಸಬೇಕು, ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಸಾರ್ವಜನಿಕರಿಗೆ ಯಾವದೇ ರೀತಿಯಲ್ಲಿ ಅಡ್ಡಿಯುಂಟು ಮಾಡಬಾರದು, ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆಯಬೇಕು, ಖಾಸಗಿ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡುವದಾದರೆ ನಿರಪೇಕ್ಷಣಾ ಪತ್ರ ಪಡೆಯಬೇಕು, ಡಿಜೆ ಬಳಸುವದಾದರೆ ಹತ್ತು ಡೆಸಿಬಲ್‍ನಷ್ಟು ಮಾತ್ರ ಬಳಸಬೇಕು, ಅದಕ್ಕಿಂತ ಹೆಚ್ಚು ಬಳಸಿದರೆ, ಸುಪ್ರೀಂಕೋರ್ಟ್ ಆದೇಶ ದಂತೆ ಕಾನೂನು ಕ್ರಮ ಕೈಗೊಳ್ಳಲಾಗು ವದು. ಗಣಪತಿ ವಿಸರ್ಜನೆ ವೇಳೆ ಲೈಫ್‍ಜಾಕೆಟ್ ಬಳಸಬೇಕು. ಪೊಲೀಸ್ ಇಲಾಖೆಯ ನಿಯಮಗಳನ್ನು ಪಾಲಿಸುವದ ರೊಂದಿಗೆ ಉತ್ತಮ ರೀತಿಯಲ್ಲಿ ಗಣೇಶೋತ್ಸವವನ್ನು ಆಚರಿಸುವಂತಾಗಬೇಕೆಂದು ಅನೂಪ್ ಮಾದಪ್ಪ ಹೇಳಿದರು. ಸಭೆಯಲ್ಲಿ ಎಎಸ್‍ಐಗಳಾದ ಗೋವಿಂದ ರಾಜು, ಮಹದೇವ್ ಉಪಸ್ಥಿತರಿದ್ದರು.