ಸೋಮವಾರಪೇಟೆ, ಆ. 26 : ಸಮಾಜದಲ್ಲಿ ಬೇರೂರಿರುವ ಕಂದಾಚಾರ, ಮೌಢ್ಯ ತೊಡೆಯಲು ವಿಜ್ಞಾನದ ಪಾತ್ರ ಅಪಾರವಾದುದು. ಈ ಹಿನ್ನೆಲೆ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಟಿ.ಜಿ.ಪ್ರೇಮಕುಮಾರ್ ಕರೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಜ್ಞಾನ ಸಂಘ ಹಾಗೂ ತಾಲೂಕು ಪ್ರೌಢಶಾಲಾ ಗಣಿತ ತರಬೇತಿ ಶಿಕ್ಷಕರ ವೇದಿಕೆಯ ಆಶ್ರಯದಲ್ಲಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಿಕ್ಷಕ ಕೆ.ಮೂರ್ತಿ ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಬೆಳವಣಿಗೆ ಕುರಿತು ಮಾತನಾಡಿದರು.

ಉಪ ಪ್ರಾಂಶುಪಾಲ ಹನುಮಂತಪ್ಪ ತಳವಾರ್, ವಿಜ್ಞಾನ ಪರಿಷತ್ತಿನ ಸದಸ್ಯ ಹ್ಯೂಬರ್ಟ್ ಡಯಾಸ್, ಬಿ.ಆರ್.ಸಿ. ಶಶಿಧರ್, ವಿಜ್ಞಾನ ಸಂಘದ ಸಂಚಾಲಕ ಮಧುಕುಮಾರ್, ಶಿಕ್ಷಕರಾದ ಸಿ.ದುರ್ಗೇಶ್, ಮಮತ, ಅನಿತಾ, ಬಿ.ಬಿ.ದಿನೇಶ್, ರುದ್ರೇಶ್, ರಶ್ಮಿ, ಮಂಜಪ್ಪ, ಫ್ರಾನ್ಸಿಸ್ ಸೇರಿದಂತೆ ಇತರರು ಹಾಜರಿದ್ದರು.