ಸೋಮವಾರಪೇಟೆ, ಆ. 26 : ಇಲ್ಲಿನ ಸಾಂದೀಪನಿ ಶಾಲೆಯಲ್ಲಿ 8 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಕೆ.ಆರ್. ಮಾಳವಿಕಾ, ತನ್ನ ಬಹುಮುಖ ಪ್ರತಿಭೆಯ ಮೂಲಕ ಗಮನ ಸೆಳೆಯುತ್ತಿದ್ದಾಳೆ.

ಕಲೆ, ನೃತ್ಯ ಸೇರಿದಂತೆ ಇನ್ನಿತರ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಈಕೆ, ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ಮುಂದಿದ್ದಾಳೆ. ಚಿತ್ರಕಲೆ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ, ದೇಶಭಕ್ತಿ ಗೀತೆಗಾಯನದಲ್ಲಿ ಪ್ರಶಸ್ತಿ, ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.

ಇದರೊಂದಿಗೆ ಚಿತ್ರಕಲೆ, ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆ, ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ್ದಾಳೆ.

2016-17ನೇ ಸಾಲಿನಲ್ಲಿ ನಡೆದ ರಾಜ್ಯಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಕಲಾರತ್ನ ಪ್ರಶಸ್ತಿಗೆ ಭಾಜನಳಾಗಿರುವ ಮಾಳವಿಕ, ಕಲೋತ್ಸವ ಸ್ಪರ್ಧೆಗಳಲ್ಲೂ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾಳೆ. ತಾಲೂಕು ಜಾನಪದ ಪರಿಷತ್‍ನಿಂದ ಆಯೋಜಿಸಿದ್ದ ನೃತ್ಯ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾಳೆ.

ಈಕೆ ಇಲ್ಲಿನ ಸಾಂದೀಪನಿ ಶಾಲೆಯ ಶಿಕ್ಷಕಿ, ಕರ್ಕಳ್ಳಿಯ ವಸಂತಿ ಮತ್ತು ರವೀಂದ್ರ ದಂಪತಿಗಳ ಪುತ್ರಿ.