ಮಡಿಕೇರಿ, ಆ. 26 : ಕೊಡವರ ಕೋವಿ ಹಕ್ಕನ್ನು ರದ್ದುಪಡಿಸುವಂತೆ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿರುವದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ನೆಲಜಿ ಫಾರ್ಮರ್ಸ್ ಕ್ಲಬ್, ಕೋವಿಯ ಹಕ್ಕನ್ನು ರಕ್ಷಿಸಲು ಜಿಲ್ಲಾಡಳಿತ ಸರಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್‍ನ ಅಧ್ಯಕ್ಷ ಎಂ.ಕೆ.ನಂಜಪ್ಪ ಅವರು, ಕೊಡವರು ಆದಿ ಕಾಲದಿಂದಲೂ ಬಂದೂಕನ್ನು ಪೂಜಾ ಪರಿಕರವೆಂದು ಪರಿಗಣಿಸಿ, ನೆಲ್ಲಕ್ಕಿಯಲ್ಲಿಟ್ಟು ಭಕ್ತಿಭಾವದಿಂದ ಪೂಜಿಸುತ್ತಾ ಬರುತ್ತಿದ್ದಾರೆ. ಅಲ್ಲದೆ ಬಂದೂಕು ಕೊಡವರ ಧಾರ್ಮಿಕ ಸಂಕೇತ ಮತ್ತು ಸಾಂಸ್ಕøತಿಕ ಲಾಂಛನವೂ ಆಗಿದ್ದು, ಉಡುಪಿನ ಅವಿಭಾಜ್ಯ ಅಂಗವಾಗಿಯೂ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಹುಟ್ಟಿನಿಂದ ಸಾವಿನವರೆಗೂ ಬಂದೂಕು ಕೊಡವರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಈ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಸರಿಯಲ್ಲವೆಂದರು.

ಕೊಡವರಿಗೆ ಕೋವಿ ಹೊಂದುವ ವಿಶೇಷ ಹಕ್ಕನ್ನು 1861ರಲ್ಲಿ ಬ್ರಿಟೀಷರೇ ನೀಡಿದ್ದು, ಸ್ವಾತಂತ್ರ್ಯ ನಂತರದಲ್ಲೂ 1959ರ ಶಸ್ತ್ರಾಸ್ತ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅನ್ವಯ ಕೊಡವ ರೇಸ್ ಮತ್ತು ಜಮ್ಮಾ ಹಿಡುವಳಿದಾರರಿಗೆ ಕೋವಿ ಹೊಂದಲು ಇರುವ ವಿನಾಯಿತಿಯನ್ನು ಮುಂದುವರಿಸಲು 1963ರಲ್ಲಿ ವಿಶೇಷ ಆದೇಶವನ್ನು ಹೊರಡಿಸಲಾಗಿತ್ತು.

ವ್ಯಕ್ತಿಯೊಬ್ಬರು ಕೊಡವರಿಗೆ ನೀಡಲಾದ ಕೋವಿ ಹೊಂದುವ ವಿಶೇಷ ಹಕ್ಕನ್ನು ರದ್ದುಗೊಳಿಸಬೇಕೆಂದು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡಿರುವದು ಖಂಡನೀಯ. ಕೊಡವರ ಕೋವಿ ಹೊಂದುವ ಹಕ್ಕನ್ನು ಯಥಾಸ್ಥಿತಿ ಮುಂದುವರೆಸಿಕೊಂಡು ಹೋಗಬೇಕೆಂದು ಹೋರಾಟ ನಡೆಸುತ್ತಿರುವ ಫೆಡರೇಷನ್ ಆಫ್ ಕೊಡವ ಸಮಾಜ, ಸಿಎನ್‍ಸಿ ಮುಖಂಡ ಎನ್.ಯು.ನಾಚಪ್ಪ, ಬೆಂಗಳೂರು ಕೊಡವ ಸಮಾಜ ಮತ್ತಿತರರ ಸಂಘಟನೆಗಳಿಗೆ ನೆಲಜಿ ಫಾರ್ಮರ್ಸ್ ಕ್ಲಬ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಘೋಷಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ಲಬ್‍ನ ಕಾರ್ಯದರ್ಶಿ ಮಂಡೀರ ಸಚಿನ್ ಗಣಪತಿ, ನಿರ್ದೇಶಕರುಗಳಾದ ಮಾಳೆಯಂಡ ವಿಜುಅಪ್ಪಯ್ಯ ಹಾಗೂ ಚಿಯಕಪೂವಂಡ ನವೀನ್ ನಾಚಪ್ಪ ಉಪಸ್ಥಿತರಿದ್ದರು.