ಸುಂಟಿಕೊಪ್ಪ, ಆ.26: ಇಲ್ಲಿನ ವಾಹನ ಚಾಲಕರ ಸಂಘದ ಸದಸ್ಯ ಬಿ.ಟಿ. ವಿಶ್ವನಾಥ ತನ್ನ ಕಾರಿನಲ್ಲಿ (ಕೆ.ಎ.12-ಬಿ.2785) ಭಾನುವಾರ ರಾತ್ರಿ ಮಡಿಕೇರಿಯಿಂದ ಸುಂಟಿಕೊಪ್ಪದ ಕಡೆಗೆ ಬರುವ ಸಂದರ್ಭ ಬೋಯಿಕೇರಿ ತಿರುವಿನಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆ ಭಾಗಕ್ಕೆ ಗಂಭೀರ ಗಾಯಗೊಂಡಿದ್ದು, ವಾಹನ ಚಾಲಕ ಸಂಘದ ಅಧ್ಯಕ್ಷರು ಸದಸ್ಯರು ಕೂಡಲೇ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಬೃಂದಾವನ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಕಳೆದ ಒಂದು ವಾರದಿಂದ ಬೋಯಿಕೇರಿ ತಿರುವಿನಲ್ಲಿ ದುರಸ್ತಿಗೊಂಡು ನಿಲ್ಲಿಸಿದ್ದ ಲಾರಿಯನ್ನು ತೆರವುಗೊಳಿಸದೆ ಇರುವದರಿಂದ ಮಳೆಗಾಲದಲ್ಲಿ ಮಂಜು ಮುಸುಕಿದ ವಾತಾವರಣ ಕೂಡಿರುವ ಕಾರಣ ಈ ದುರ್ಘಟಣೆಗೆ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ. ಪ್ರಕರಣ ಮಡಿಕೇರಿ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.