ಒಡೆಯನಪುರ, ಆ. 25: ಇಲ್ಲಿಗೆ ಸಮೀಪದ ಶನಿವಾರಸಂತೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಸದ್ಭಾವನಾ ದಿನ ಹಾಗೂ ವಿದ್ಯಾರ್ಥಿ ಸಂಸದ್ ಮಂಡಳಿ ಗಾಗಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ನಡೆದ ಚುನಾವಣೆಯಲ್ಲಿ ಆಯ್ಕೆಗೊಂಡ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭವನ್ನು ಹಮ್ಮಿ ಕೊಳ್ಳಲಾಯಿತು.
ವಿದ್ಯಾಸಂಸ್ಥೆ ಕಾರ್ಯದರ್ಶಿ ಜಗನ್ಪಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಸಂಸದ್ ಚುನಾವಣೆ ನಡೆಸುವದರಿಂದ ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಹಾಗೂ ರಾಜಕೀಯ, ಶಾಸಕಾಂಗ ವ್ಯವಸ್ಥೆ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ರಾಷ್ಟ್ರೀಯ ಸದ್ಭಾವನಾ ದಿನದ ಕುರಿತು ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ವಿನೇಶ್, ಚಂದ್ರಕಾಂತ್ ಮಾತನಾಡಿದರು.
ವಿದ್ಯಾಸಂಸ್ಥೆ ಅಧ್ಯಕ್ಷ ಎ.ಎಂ. ಆನಂದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಸಂಸದ್ ಚುನಾವಣೆಯಲ್ಲಿ ಆಯ್ಕೆಗೊಂಡ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತದಾನದ ಅರಿವು ಮೂಡಿಸಿಕೊಳ್ಳುವದರ ಜೊತೆಯಲ್ಲಿ ವಿದ್ಯಾಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದು ಉತ್ತೀರ್ಣಗೊಳ್ಳಲು ಪ್ರಯತ್ನಿಸ ಬೇಕೆಂದರು.
ಪ.ಪೂ.ಕಾಲೇಜಿನ ಪ್ರಾಂಶುಪಾಲ ಅಶೋಕ್, ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ನರಸಿಂಹ ಮೂರ್ತಿ ಮಾತನಾಡಿದರು. ವಿದ್ಯಾರ್ಥಿ ಸಂಸದ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟ ಚುನಾವಣಾ ಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಪ.ಪೂ. ಕಾಲೇಜಿನ ಉಪನ್ಯಾಸಕ ಶರತ್ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ ಗೊಂಡ ವಿದ್ಯಾರ್ಥಿ ನಾಯಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಾಮೂಹಿಕ ಪ್ರತಿಜ್ಞಾವಿಧಿ ಬೋಧಿಸಿದರು.
ಚುನಾವಣೆಯಲ್ಲಿ ಆಯ್ಕೆಗೊಂಡ ವಿದ್ಯಾರ್ಥಿ ನಾಯಕರಿಗೆ ಶಿಕ್ಷಕಿ ವಿಮಲ ಪ್ರಮಾಣವಚನ ಭೋದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಿ.ಟಿ. ಸೋಮಶೇಖರ್, ಪ್ರಥಮ ದರ್ಜೆ ಕಾಲೇಜ್, ಪ.ಪೂ. ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಅದ್ಯಾಪಕರ ವರ್ಗ ಪಾಲ್ಗೊಂಡಿದ್ದರು.
- ವಿ.ಸಿ. ಸುರೇಶ್ ಒಡೆಯನಪುರ