ವೀರಾಜಪೇಟೆ, ಆ. 25: ಕಳೆದ 83 ವರ್ಷಗಳ ಹಿಂದೆ ಮಾಕುಟ್ಟದಲ್ಲಿ 1288.75 ಎಕರೆ ಭೂಮಿಯನ್ನು 99 ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆದಿದ್ದ ಪೋರ್ಟ್‍ಲ್ಯಾಂಡ್ ಕಂಪೆನಿಯ ಮಾಲೀಕರು. ಇದನ್ನು ಪ್ರತಿನಿಧಿಸುತ್ತಿದ್ದ ಕೆ. ಕೋರ ಎಂಬವರು ಸೇರಿ ಈ ಭೂಮಿಯ ಪೈಕಿ 118.87 ಎಕರೆ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಮೇರೆ ವೀರಾಜಪೇಟೆ ನಗರ ಪೊಲೀಸರು ಕಂದಾಯ ಇಲಾಖೆಯ ಇಬ್ಬರು ನಿವೃತ್ತ ಅಧಿಕಾರಿಗಳು ಸೇರಿದಂತೆ ಒಟ್ಟು 8ಮಂದಿ ವಿರುದ್ಧ ಕಲಂ 1860 (409-420) ರ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.1936 ರಲ್ಲಿ ಮಾಕುಟ್ಟದ ಪೋರ್ಟ್‍ಲ್ಯಾಂಡ್ ರಬ್ಬರ್ ಕಂಪೆನಿಯ ಮಾಲೀಕರು, ಕಂಪೆನಿಯ ಪ್ರತಿನಿಧಿ ಕೆ.ಕೋರ ಅವರು ಸರಕಾರದಿಂದ 1288.75 ಎಕರೆ ಜಾಗವನ್ನು 99ವರ್ಷಗಳಿಗೆ ಗುತ್ತಿಗೆ ಆಧಾರದ ಮೇಲೆ ರಬ್ಬರ್ ಪ್ಲಾಂಟೇಶನ್‍ಗಾಗಿ ಭೂಮಿ ಪಡೆದಿದ್ದರು. ಈ ಭೂಮಿಯ ಪೈಕಿ 118-87 ಎಕರೆ ಭೂಮಿಯನ್ನು ಪೋರ್ಟ್‍ಲ್ಯಾಂಡ್ ಕಂಪೆನಿಯ ಮಾಲೀಕರು, ಇದರ ಪ್ರತಿನಿಧಿ ಕೆ.ಕೋರ ಸೇರಿ ತಾ:25-3-1980 ರಲ್ಲಿ ಬಿ.ಸಿ.ಪೌಲೂಸ್, ಚಿಣ್ಣಮ್ಮ ಮ್ಯಾಥ್ಯು, ಮ್ಯಾಥ್ಯು ಹಾಗೂ ಯು. ಮ್ಯಾಥ್ಯು ಎಂಬವರಿಗೆ ಅಕ್ರಮವಾಗಿ ಮಾರಾಟ ಮಾಡಿ ವೀರಾಜಪೇಟೆ ಉಪ ನೋಂದಣಿ ಕಚೇರಿಯಲ್ಲಿ ನೋಂದಾಯಿಸಿ ದಸ್ತಾವೇಜು ನಂ 570/1979-80 ರ ಪ್ರಕಾರ ದಾಖಲು ಮಾಡಲಾಗಿತ್ತು. ಉಪ ನೋಂದಣಿಯ ಕಚೇರಿಯ ದಾಖಲೆಯನ್ನು ಆಧರಿಸಿ ತಾ:6-3-1981 ರಲ್ಲಿ ( ಎಂ.ಸಿ.ನಂ10/1980-81). ಭೂಮಿಯ ಮೂಲ ದಾಖಲೆಯ ನಕಲಿ ದೃಢೀಕರಣ ಪತ್ರವನ್ನು ಆಗಿನ ರೆವಿನ್ಯೂ ಅಧಿಕಾರಿಗಳು(ಎಂ.ಸಿ.) ತಯಾರಿಸಿ ಖರೀದಿದಾರರ ಖಾತೆಗೂ ಭೂಮಿಯನ್ನು ವರ್ಗಾಯಿಸಲಾಗಿತ್ತು.
ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಈಚೆಗೆ ಭೂಮಿಯ ಹಿಂದಿನ ದಾಖಲೆಗಳನ್ನು ಪರಿಶೀಲಿಸಿದಾಗ ಹೆಗ್ಗಳದ ಸರ್ವೆ ನಂ. 211/1ರಲ್ಲಿ 88.27 ಎಕರೆ, ಸರ್ವೆ ನಂ 211/16ರಲ್ಲಿ 30.60 ಎಕರೆ ಗುತ್ತಿಗೆ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಕಲಿ ಎಂ.ಸಿ.ಯನ್ನು ತಯಾರಿಸಿ ಭೂಮಿಯನ್ನು ಖರೀದಿದಾರರಾದ ಬಿ.ಸಿ.ಪೌಲೂಸ್ ಸಂಗಡಿಗರ ಖಾತೆಗೆ ವರ್ಗಾಯಿಸಿರುವದು ಪತ್ತೆಯಾಗಿದೆ.
ವೀರಾಜಪೇಟೆ ತಾಲೂಕು ತಹಶೀಲ್ದಾರ್ ಪುರಂದರ ಅವರು ಗುತ್ತಿಗೆ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣ ಪತ್ತೆಯಾದ (ಮೊದಲ ಪುಟದಿಂದ) ತಕ್ಷಣ ಇಲ್ಲಿನ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಗುತ್ತಿಗೆ ಭೂಮಿ ಮಾರಾಟ ಮಾಡಿದ ಪೋರ್ಟ್ ಲ್ಯಾಂಡ್ ಕಂಪೆನಿಯ ಮಾಲೀಕರು, ಅದರ ಪ್ರತಿನಿಧಿ ಕೆ.ಕೋರ, ಗುತ್ತಿಗೆ ಭೂಮಿಯ ಅಕ್ರಮ ಖರೀದಿದಾರರಾದ ಬಿ.ಸಿ.ಪೌಲೂಸ್, ಚಿಣ್ಣಮ್ಮ ಮ್ಯಾಥ್ಯೂ, ಮ್ಯಾಥ್ಯು, ಯು. ಮ್ಯಾಥ್ಯು ಹಾಗೂ ಕಂದಾಯ ಇಲಾಖೆಯಲ್ಲಿ ದಾಖಲೆ ಗಳನ್ನು ಪರಿಶೀಲಿಸಿ ನಕಲಿ ದಾಖಲೆ ಗಳಿಂದ ಎಂ.ಸಿ. ಸೃಷ್ಟಿಸಿ ಭೂಮಿ ಯನ್ನು ಖಾತೆಗೆ ವರ್ಗಾಯಿಸಿ ಸಹಕರಿಸಿ ಸರಕಾರಕ್ಕೆ ವಂಚಿಸಿದ ಆಗಿನ ರಾಜಸ್ವ ನಿರೀಕ್ಷಕರಾಗಿದ್ದು ಈಗ ಸೇವೆಯಿಂದ ನಿವೃತ್ತಿ ಹೊಂದಿರುವ ಕೆ.ಬಿ.ಅಯ್ಯಪ್ಪ, ಆಗಿನ ಡೆಪ್ಯುಟಿ ತಹಶೀಲ್ದಾರ್ ಈಗ ಸೇವೆಯಿಂದ ನಿವೃತ್ತಿಗೊಂಡಿರುವ ಹುದಿಕೇರಿ ಬಳಿಯ ಕೊಣನಗೇರಿ ಗ್ರಾಮದ ಸಿ.ಎಂ.ಪೊನ್ನಪ್ಪ ಸೇರಿದಂತೆ ಒಟ್ಟು ಎಂಟು ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ನಗರ ಪೊಲೀಸರು ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಪ್ರಥಮ ವರ್ತಮಾನ ವರದಿ ಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ತಹಶೀಲ್ದಾರ್ ಅವರ ದೂರಿನಂತೆ ತಾ:23ರಂದು ಹೊಸ ಕಟ್ಟಡದ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಯ ಮಹಜರು ನಡೆಸಿದರು. ದೂರಿನಲ್ಲಿರುವಂತೆ ಮುಂದೆ ಪೊಲೀಸರು ರೆವಿನ್ಯೂ ದಾಖಲೆಗಳ ತಪಾಸಣೆ ನಡೆಸಲಿದ್ದಾರೆ. -ಡಿ.ಎಂ.ಆರ್.