ಶ್ರೀಮಂಗಲ, ಆ. 25 : ಮಳೆ, ಭೂಕುಸಿತ, ಪ್ರವಾಹಕ್ಕೆ ತುತ್ತಾಗಿ ಉಂಟಾಗಿರುವ ಬೆಳೆ ನಷ್ಟದ ಸಮೀಕ್ಷೆಯನ್ನು ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯೊಂದಿಗೆ ಕಂದಾಯ ಇಲಾಖೆ ನಡೆಸುತ್ತಿದ್ದು, ಈ ಇಲಾಖೆಗಳು ಮಾಡುವ ಶಿಫಾರಸ್ಸಿನಂತೆ ಶೇಕಡ 33ಕ್ಕಿಂತ ಹೆಚ್ಚು ಬೆಳೆ ನಷ್ಟ ಉಂಟಾಗಿರುವ ಪ್ರಕರಣಗಳಿಗೆ ಎನ್.ಡಿ.ಆರ್.ಎಫ್ ಮಾನದಂಡದಂತೆ ಪರಿಹಾರ ವಿತರಿಸಲು ಬೆಳೆ ನಷ್ಟಕ್ಕೆ ತುತ್ತಾಗಿರುವ ಬೆಳೆಗಾರರಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಕೊಡಗು ಬೆಳೆಗಾರರ ಒಕ್ಕೂಟದ ನಿಯೋಗ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮಳೆಯಿಂದ ಉಂಟಾಗಿರುವ ಜೀವಹಾನಿ, ಬೆಳೆ ನಷ್ಟಕ್ಕೆ ಸೂಕ್ತ ಹಾಗೂ ತ್ವರಿತವಾಗಿ ಪರಿಹಾರ ವಿತರಿಸಲು ಸಲ್ಲಿಸಿದ ಮನವಿಗೆ ಅವರು ಪ್ರತಿಕ್ರಿಯಿಸಿದರು.
ಕಳೆದ ವರ್ಷ ಬೆಳೆ ನಷ್ಟ ಅರ್ಜಿ ಸಲ್ಲಿಕೆ ಮತ್ತು ಪರಿಹಾರ ವಿತರಣೆಯಲ್ಲಿ ಉಂಟಾದ ಕೆಲವು ಗೊಂದಲಗಳನ್ನು ನಿವಾರಿಸಿ ಈ ಬಾರಿ ಎರಡು ಪುಟದ ನಮೂನೆಯಲ್ಲಿ ಅರ್ಜಿ ತಯಾರಿಮಾಡಲಾಗಿದೆ. ಆಯಾಯ ಹೋಬಳಿಯ ಕಂದಾಯ ಪರಿವೀಕ್ಷಕರ ಕಚೇರಿ ವ್ಯಾಪ್ತಿಯಲ್ಲಿ ಈ ಬಾರಿ ಬೆಳೆ ನಷ್ಟ ಪರಿಹಾರದ ಅರ್ಜಿ ಪರಿಶೀಲಿಸಿ ಶಿಫಾರಸ್ಸು ಮಾಡಲು ಅಧಿಕಾರ ನೀಡಲಾಗಿದೆ. ಪ್ರತಿ ಸರ್ವೆ ನಂಬರಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ ಆ ಜಾಗದಲ್ಲಿ ಇರುವ ಎಲ್ಲಾ ಬೆಳೆಗೆ ಉಂಟಾಗಿರುವ ನಷ್ಟದ ವಿವರವನ್ನು ದಾಖಲಿಸಲು ಮತ್ತು ಮಳೆ, ಪ್ರವಾಹ, ಭೂಕುಸಿತದಿಂದ ಉಂಟಾಗಿರುವ ನಷ್ಟವನ್ನು ದಾಖಲಿಸಿ ಅದರ ಫೆÇೀಟೋವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕಾಗಿದೆ. ಅರ್ಜಿಯೊಂದಿಗೆ ಆರ್.ಟಿ.ಸಿ, ಆಧಾರ್ ಕಾರ್ಡ್, ಆಧಾರ್ಸಂಖ್ಯೆ ಲಗತ್ತಿಸಿರುವ ಬ್ಯಾಂಕ್ ಖಾತೆಯ ಪಾಸ್ಬುಕ್ಕಿನ ನಕಲು ಪ್ರತಿಯನ್ನು ಸಲ್ಲಿಸಬೇಕಾಗಿದೆ ಎಂದರು. ಇದೇ ಸಂದರ್ಭ ನಿಯೋಗದಿಂದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೂ ಮನವಿ ಸಲ್ಲಿಸಲಾಯಿತು.
ಚೆಕ್ ಡ್ಯಾಮ್ಗೆ ಅವಕಾಶ : ಜಿಲ್ಲೆಯ ನದಿಗಳಿಗೆ ಬೇಸಿಗೆಯಲ್ಲಿ ನೀರು ಸಂಗ್ರಹಕ್ಕೆ ಚೆಕ್ ಡ್ಯಾಮ್ ನಿರ್ಮಿಸುವ ಬಗ್ಗೆ ಬೆಳೆಗಾರರ ಒಕ್ಕೂಟ ಈ ಹಿಂದೆ ಸಲ್ಲಿಸಿದ ಮನವಿಯ ಬಗ್ಗೆ ಗಮನ ಸೆಳೆದ ಸಂದರ್ಭ ಜಿಲ್ಲಾ ಪಂಚಾಯತ್ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ ನದಿಗಳಿಗೆ ಚೆಕ್ ಡ್ಯಾಮ್ ನಿರ್ಮಿಸಲು ಅವಕಾಶವಿದೆ. 8ರಿಂದ 10 ಲಕ್ಷ ಇದಕ್ಕೆ ಅನುಧಾನ ಬಳಸಿಕೊಳ್ಳಲು ಅವಕಾಶವಿದೆ ಎಂದು ಸಿ.ಇ.ಓ ಲಕ್ಷ್ಮಿಪ್ರಿಯ ವಿವರಿಸಿದರು.
ಮುಖ್ಯಮಂತ್ರಿಯವರಿಗೆ ಮನವಿ: ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರತ್ಯೇಕ ಮನವಿ ರವಾನಿಸಲಾಯಿತು. ನಿಯೋಗದಲ್ಲಿ ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬಿಲಿರ ಹರೀಶ್ ಅಪ್ಪಯ್ಯ, ಕಾರ್ಯದರ್ಶಿ ಅಣ್ಣೀರ ಹರೀಶ್ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಖಜಾಂಚಿ ಮಾಣೀರ ವಿಜಯನಂಜಪ್ಪ, ತಾಂತ್ರಿಕ ಸಲಹೆಗಾರ ಚೆಪ್ಪುಡೀರ ಶರಿಸುಬ್ಬಯ್ಯ, ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ನಿರ್ದೇಶಕರಾದ ಅರಮಣಮಾಡ ಸತೀಶ್ದೇವಯ್ಯ ಅವರು ಹಾಜರಿದ್ದರು.