ಮಡಿಕೇರಿ, ಆ. 24 : ವಿದ್ಯಾರ್ಥಿಗಳು ಬಣ್ಣದ ಬದುಕಿಗೆ ಆಸೆ ಪಡದೆ, ಯಾವದಾದರೂ ಉದ್ಯೋಗ ಪಡೆಯುವತ್ತ ಗುರಿ ಸಾಧಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸಲಹೆ ಮಾಡಿದ್ದಾರೆ.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಸಕ್ತ ಸಾಲಿನ ಪಠ್ಯೇತರ ಮತ್ತು ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಜನರಿಗೆ ಎ.ಪಿ.ಜೆ.ಅಬ್ದುಲ್ ಕಲಾಂ ಮಾದರಿಯಾಗಬೇಕು. ಅಬ್ದುಲ್ ಕಲಾಂ ಅವರು ದಿನಪತ್ರಿಕೆಯನ್ನು ಮನೆ ಮನೆ ಹಂಚಿ ವಿದ್ಯಾಭ್ಯಾಸ ಮಾಡಿ ವಿಜ್ಞಾನಿಯಾದರು. ಅವರಂತೆ ಗುರಿ ಸಾಧಿಸಲು ಸತತ ಪ್ರಯತ್ನ ಪಡಬೇಕು ಎಂದು ಸುನಿಲ್ ಸುಬ್ರಮಣಿ ತಿಳಿಸಿದರು.
ವಿದ್ಯಾರ್ಥಿಗಳು ದಿನಪತ್ರಿಕೆಯನ್ನು ಓದಬೇಕು. ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳಬೇಕು. ಸಮಾಜದ ಆಗುಹೋಗುಗಳ ಬಗ್ಗೆ ಜ್ಞಾನವಿರಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲೆ ಪ್ರೊ. ವೈ. ಚಿತ್ರಾ, ಪ್ರಾಧ್ಯಾಪಕ ಶಶಿಧರ ಮಾತನಾಡಿದರು. ಕುಸುಮ ಇತರರು ಇದ್ದರು. ಪ್ರಾಧ್ಯಾಪಕ ಡಾ. ಕೆ.ಸಿ. ದಯಾನಂದ ಸ್ವಾಗತಿಸಿ, ಚಂದ್ರಕಲಾ ನಿರೂಪಿಸಿದರು. ವಿದ್ಯಾರ್ಥಿ ಶಿವ ಪ್ರಾರ್ಥಿಸಿ, ಪ್ರಾಧ್ಯಾಪಕ ರಾಘವೇಂದ್ರ ವಂದಿಸಿದರು.