ಚೆಟ್ಟಳ್ಳಿ, ಆ. 24: ಕುಶಾಲನಗರದ ಜಾಮಿಯಾ ಮಸೀದಿ, ಜಾಮಿಯಾ ಯೂತ್ ಕಮಿಟಿ ಹಾಗೂ ಮೈಸೂರಿನ ಅಲ್ ಅನ್ಸಾರ್ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ನೆರೆಸಂತ್ರಸ್ತರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕುಶಾಲನಗರದ ಸರ್ಕಾರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿತ್ತು.

ಸುಮಾರು 300ಕ್ಕೂ ಹೆಚ್ಚು ರೋಗಿಗಳಿಗೆ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ಸ್ಥಳೀಯ ವೈದ್ಯ ಡಾ. ಚೇತನ್‍ಕುಮಾರ್ ಹಾಗೂ ಡಾ. ರಾಮಚಂದ್ರ ಅವರು ತಪಾಸಣೆ ನಡೆಸಿದರು. ಈ ಸಂದರ್ಭ ಮಾತನಾಡಿದ ಜಾಮಿಯಾ ಮಸೀದಿ ಕಾರ್ಯದರ್ಶಿ, ತನ್ವೀರ್ ಅಹ್ಮದ್, ಜಲಪ್ರಳಯದಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಉದ್ದೇಶದಿಂದ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ ಎಂದರು. ಜಾಮಿಯಾ ಮಸೀದಿ ಸದಸ್ಯ ರಫೀಕ್ ಮಾತನಾಡಿ, ಜಾಮಿಯಾ ಯೂತ್ ಕಮಿಟಿಯು ಹೆಚ್ಚಿನ ಉತ್ಸಾಹದಿಂದ ಈ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದು, ಸುಮಾರು 300ಕ್ಕೂ ಹೆಚ್ಚು ರೋಗಿಗಳು ಆರೋಗ್ಯ ತಪಾಸಣೆಯನ್ನು ಪರೀಕ್ಷಿಸಿಕೊಂಡಿದ್ದಾರೆ ಎಂದರು. ಈ ಸಂದರ್ಭ ಯೂತ್ ಕಮಿಟಿ ಅಧ್ಯಕ್ಷ ಅಬ್ದುರೆಹಮಾನ್, ಉಪಾಧ್ಯಕ್ಷ ಜಬಿಯುಲ್ಲಾ, ಸದಸ್ಯರಾದ ಫಿರೋಜ್, ಫರಾನ್ ಹಾಗೂ ಮತ್ತಿತರರು ಇದ್ದರು.