*ಗೋಣಿಕೊಪ್ಪಲು, ಆ. 24: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಟ್ಟಿದ್ದ ತಿತಿಮತಿ ಉಪ ಪೊಲೀಸ್ ಠಾಣೆ ಇದೀಗ ಗೋಣಿಕೊಪ್ಪಲು ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಟ್ಟಿದೆ. ಈ ಸಂಬಂಧ ರಾಜ್ಯ ಸರ್ಕಾರ ತಾ. 23 ರಂದು ಆದೇಶ ಹೊರಡಿಸಿದ್ದು 80 ವರ್ಷಗಳಿಂದ ಹೊಂದಿದ್ದ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಂಬಂಧವನ್ನು ಕಳೆದುಕೊಂಡಿದೆ. ಪೊನ್ನಂಪೇಟೆ ಕಿಗ್ಗಟ್ಟು ನಾಡು ತಾಲೂಕು ಕೇಂದ್ರ ಆಗಿದ್ದ ಸಂದರ್ಭದಲ್ಲಿ ಪೊನ್ನಂಪೇಟೆಯಲ್ಲಿ ಪೊಲೀಸ್ ಠಾಣೆ ತೆರೆಯಲಾಯಿತು. ಅಂದಿನ ಬ್ರಿಟಿಷ್ ಸರಕಾರದ ದೂರದೃಷ್ಟಿಯಿಂದ ತಿತಿಮತಿ ಉಪ ಪೊಲೀಸ್ ಠಾಣೆ ಅಂತರಾಜ್ಯ ಹೆದ್ದಾರಿ ಪಕ್ಕದಲ್ಲಿದ್ದರೂ; ರಸ್ತೆಯಿಂದ 200 ಮೀಟರ್ ದೂರದಲ್ಲಿ ಕಟ್ಟಡ ನಿರ್ಮಿಸಲಾಗಿದೆ.
ತಿತಿಮತಿ ಉಪ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಿದ್ದ ಗ್ರಾಮ ಗಳು ಹಾಗೂ ಅರಣ್ಯ ಪ್ರದೇಶಗಳೆಲ್ಲವೂ ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡಲಿವೆ. ತಿತಿಮತಿ ಉಪ ಪೊಲೀಸ್ ಠಾಣೆ ಪೊನ್ನಂಪೇಟೆಯಿಂದ 14 ಕಿಮೀ ದೂರದಲ್ಲಿದ್ದರೆ ಗೋಣಿಕೊಪ್ಪಲಿನಿಂದ 9 ಕಿಮೀ ಅಂತರದಲ್ಲಿದೆ. ಅಂತರಾಜ್ಯ ಹೆದ್ದಾರಿಯಲ್ಲಿರುವ ಗೋಣಿಕೊಪ್ಪಲು ಹಾಗೂ ತಿತಿಮತಿ ಒಂದೇ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವದು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಒಳ್ಳೆಯದು ಎಂದು 2014ರಲ್ಲಿ ಅಂದಿನ ಪೊಲೀಸ್ ವರಿಷ್ಠಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಸರ್ಕಾರ ಇದೀಗ ಆದೇಶ ಹೊರಡಿಸಿದೆ ಎಂದು ಗೋಣಿಕೊಪ್ಪಲು ವೃತ್ತ ನಿರೀಕ್ಷಕ ದಿವಾಕರ್ ತಿಳಿಸಿದ್ದಾರೆ.
ಗೋಣಿಕೊಪ್ಪಲು ಪೊಲೀಸ್ ಠಾಣೆ ವ್ಯಾಪ್ತಿ ಹೆಚ್ಚಿದ್ದು ತಿತಿಮತಿ ಉಪ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಿದ್ದ ಆನೆಚೌಕೂರು. ದೇವಮಚ್ಚಿ, ಮತ್ತಿಗೋಡು ಅರಣ್ಯ ವ್ಯಾಪ್ತಿಯು ಇದೀಗ ಗೋಣಿಕೊಪ್ಪಲು ಠಾಣಾ ವ್ಯಾಪ್ತಿಗೆ ಒಳಪಡಲಿವೆ.
ಚಿತ್ರ, ವರದಿ: ಎನ್.ಎನ್. ದಿನೇಶ್