ಸುಂಟಿಕೊಪ್ಪ, ಆ. 23: ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸುಂಟಿಕೊಪ್ಪ ಬಿಜೆಪಿ ಘಟಕ ಒತ್ತಾಯಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳ ಶಾಸಕರುಗಳಿಗೆ ಸಚಿವ ಸ್ಥಾನವನ್ನು ನೀಡಲಾಗಿದೆ. ಆದರೆ ಕೊಡಗಿನ ಬಿಜೆಪಿ ಭದ್ರಕೋಟೆಯ ರೂವಾರಿಗಳಲ್ಲಿ ಒಬ್ಬರಾದ ಅಪ್ಪಚ್ಚು ರಂಜನ್ ಅವರಿಗೆ ಸ್ಥಾನ ನೀಡದಿರುವದು ಸರಿಯಾದ ಕ್ರಮವಲ್ಲ ಎಂದು ಬಿಜೆಪಿ ನಗರಾಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ವರ್ಷದಿಂದ ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸುತ್ತಿದ್ದು, ಪ್ರತಿ ಗ್ರಾಮಗಳಿಗೂ ಶಾಸಕರು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರದ ನಿಟ್ಟಿನಲ್ಲಿ ನಿರಾಶ್ರಿತರೊಂದಿಗೆ ಸ್ಪಂದಿಸುತ್ತಿದ್ದಾರೆ. ಇಂತಹ ಸಮಸ್ಯೆಗಳ ಸ್ಥಿತಿಗತಿಗಳು ಹೊರಜಿಲ್ಲೆಗಳ ಸಚಿವರುಗಳಿಗೆ ನಿಭಾಯಿಸಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನವನ್ನು ನೀಡಲೇಬೇಕು ಎಂದು ಸುನಿಲ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.