ಮಡಿಕೇರಿ, ಆ. 23: ಐತಿಹಾಸಿಕ ಹಿನ್ನೆಲೆಯಿರುವ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಒಂದೊಮ್ಮೆ ದಸರಾ ಸಮಿತಿ, ದಶಮಂಟಪ ಸಮಿತಿ, ಸಾರ್ವಜನಿಕರನ್ನೊಳಗೊಂಡು ಒಮ್ಮತದ ಆಯ್ಕೆಯೊಂದಿಗೆ ಸಮಿತಿ ಕಾರ್ಯಾಧ್ಯಕ್ಷರ ಆಯ್ಕೆ ಆಗುತಿತ್ತು. ಕಳೆದ ವರ್ಷದಿಂದ ಪೈಪೋಟಿ ಆರಂಭವಾಗಿದ್ದು, ಕಳೆದ ಸಾಲಿನಲ್ಲಿ ಇಬ್ಬರಿದ್ದು, ಈ ಬಾರಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಹತ್ತು ಮಂದಿಯ ಹೆಸರು ಸೂಚನೆಯಾಗಿರುವದು ದಸರಾ ಸಮಿತಿಯೊಳಗಿನ ವಿಶೇಷ, ವಿಚಿತ್ರ ಬೆಳವಣಿಗೆಯಾಗಿದೆ.ಮಡಿಕೇರಿ ದಸರಾ ದಶಮಂಟಪ ಸಮಿತಿ ಸಭೆ ಇಂದು ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಿತು. ಸಭೆಯ ಕಾರ್ಯಸೂಚಿಯಲ್ಲಿ ಆಡಳಿತ ಮಂಡಳಿ ರಚನೆ ಬಗ್ಗೆ ವಿಷಯ ಪ್ರಸ್ತಾಪಿಸಲಾಯಿತು. ದಶಮಂಟಪ ಸಮಿತಿ ಅಧ್ಯಕ್ಷ ಸಿ.ಎಸ್. ರಂಜಿತ್ ಕುಮಾರ್ ದಸರಾ ಸಮಿತಿ ಅಧ್ಯಕ್ಷರಾಗಿ ಜಿಲ್ಲಾಧಿಕಾರಿಗಳಿದ್ದಾರೆ. ಆದರೆ ಇದುವರೆಗೆ ಯಾವದೇ ಸಭೆ ಆಗಿಲ್ಲ ಹಾಗಾಗಿ ದಸರಾ ಸಮಿತಿಗೆ ಪದಾದಿ üಕಾರಿಗಳನ್ನು ನೇಮಕ ಮಾಡಿ ಜಿಲ್ಲಾದಿ üಕಾರಿಗಳನ್ನು ಭೇಟಿ ಮಾಡಿ ದಸರಾ ಉತ್ಸವ ಸಂಬಂಧ ಮಾಹಿತಿ ನೀಡ ಬೇಕಾಗಿದೆ. ಉತ್ಸವಕ್ಕೆ ಚಾಲನೆ ನೀಡ ಬೇಕಾಗಿದೆ. ದಸರಾವನ್ನು ಅದ್ಧೂರಿ ಯಾಗಿ ಅಥವಾ ಸರಳವಾಗಿ ಆಚರಿ ಸುವದೋ ಎಂಬ ಬಗ್ಗೆ ತೀರ್ಮಾನ ಮಾಡಬೇಕಾಗಿದೆ.

(ಮೊದಲ ಪುಟದಿಂದ) ಈ ಹಿನ್ನೆಲೆಯಲ್ಲಿ ಪದಾಧಿಕಾರಿಗಳನ್ನು ನೇಮಿಸಬೇಕಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ದಶಮಂಟಪಗಳ ಸಮಿತಿಯವರು ಕೆಲವರು ತಾವಾಗಿಯೇ ಕಾರ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರನ್ನು ಸೂಚಿಸಿದರೆ, ಇನ್ನೂ ಕೆಲವರು ತಮ್ಮ ಬೆಂಬಲಿತ ಅಭ್ಯರ್ಥಿಯ ಹೆಸರುಗಳನ್ನು ಸೂಚಿಸಿದರು. ಈ ಪೈಕಿ ಇಂದು ಸಭೆಗೆ ಬಾರದವರ ಹೆಸರುಗಳೂ ಸೇರ್ಪಡೆಗೊಂಡವು. ಬಾರದವರ ಹೆಸರನ್ನು ಸೂಚಿಸಿದ್ದಕ್ಕೆ ಆಕ್ಷೇಪವೂ ವ್ಯಕ್ತಗೊಂಡಿತು. ನಂತರದಲ್ಲಿ ಮುಂದಿನ ಸಭೆಯಲ್ಲಿ ಆಯ್ಕೆ ಅಂತಿಮಗೊಳಿಸುವ ತೀರ್ಮಾನಕ್ಕೆ ಬಂದಾಗ ಇಂದು ಸಭೆಗೆ ಬಾರದೆ ಇರುವ ಆಕಾಂಕ್ಷಿಗಳಿದ್ದರೆ ಅವರುಗಳ ಹೆಸರುಗಳನ್ನು ಸೇರಿಸಿಕೊಳ್ಳಬಹುದೇ ಎಂಬ ಪ್ರಶ್ನೆ ಕೂಡ ಕೇಳಿ ಬಂದಿತು. ಕೊನೆಗೆ ಅದಕ್ಕೂ ಅವಕಾಶ ನೀಡಲಾಯಿತು. ಇಂದಿನ ಸಭೆಯಲ್ಲಿ ಹತ್ತು ಮಂದಿಯ ಹೆಸರು ಸೂಚನೆಯಾಗಿದ್ದರೂ ಮುಂದಿನ ಸೋಮವಾರ ಅಂತಿಮ ಆಯ್ಕೆಯಾಗಲಿದೆ. ಅದುವರೆಗೆ ಇನ್ನಷ್ಟು ಮಂದಿಯ ಹೆಸರು ಸೇರ್ಪಡೆಯಾಗಲಿದೆಯೆಂಬದೇ ಪ್ರಶ್ನೆ...?

ಒಮ್ಮತಕ್ಕೆ ಬನ್ನಿ...

ಸಭೆಯಲ್ಲಿದ್ದ ಪ್ರಮುಖರು ತಮ್ಮ ಅಭಿಪ್ರಾಯದೊಂದಿಗೆ ದಸರಾ ಸಮಿತಿಯಲ್ಲಿ ದಶಮಂಟಪ ಸಮಿತಿಗೆ ತನ್ನದೇ ಆದ ಗೌರವವಿದೆ. ಈ ಹಿಂದೆ ಸಾರ್ವಜನಿಕರನ್ನೊಳಗೊಂಡು ಕಾರ್ಯಾಧ್ಯಕ್ಷ ನೇಮಕವಾಗುತ್ತಿತ್ತು. ನಂತರದಲ್ಲಿ ಬೈಲಾ ಪ್ರಕಾರ ದಶಮಂಟಪ ಸಮಿತಿಯಿಂದ ಓರ್ವರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಾ ಬರಲಾಗಿದೆ. ಇದೀಗ ಹತ್ತು ಮಂದಿಯ ಹೆಸರು ಬಂದಿದೆ. ಈ ಹತ್ತು ಮಂದಿ ತಾವೇ ಚರ್ಚಿಸಿ ಒಮ್ಮತದೊಂದಿಗೆ ಅರ್ಹರನ್ನು ಆಯ್ಕೆ ಮಾಡಲಿ ಎಂಬ ಸಲಹೆ ವ್ಯಕ್ತಪಡಿಸಿದರು. ಈ ಬಗ್ಗೆ ಮುಂದಿನ ಸಭೆಯಲ್ಲಿ ಅಂತಿಮಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು.

ಅನುದಾನ ಬರಲಿದೆ

ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಕಳೆದ ಬಾರಿ ಅನಿವಾರ್ಯ ಪರಿಸ್ಥಿತಿಯಲ್ಲಿ ಸರಳವಾಗಿ ದಸರಾ ಆಚರಣೆ ಮಾಡಲಾಗಿದೆ. ಸರ್ಕಾರದಿಂದ ರೂ.50 ಲಕ್ಷ ಅನುದಾನ ಮಂಜೂರಾಗಿದ್ದರೂ ಇನ್ನೂ ಕೈ ಸೇರಿಲ್ಲ. ಈ ನಿಟ್ಟಿನಲ್ಲಿ ಶಾಸಕರೊಡಗೂಡಿ ಆಗಿನ ಉಸ್ತುವಾರಿ ಸಚಿವರನ್ನೂ ಪದೇ ಪದೇ ಭೇಟಿ ಮಾಡಿ ಕೋರಿಕೊಂಡ ಮೇರೆಗೆ ಅನುದಾನಕ್ಕೆ ಹಣಕಾಸು ಇಲಾಖೆಯಿಂದ ಮಂಜೂರಾತಿ ದೊರೆತಿದೆ. ಸಧ್ಯದಲಿಯೇ ಅನುದಾನ ಬರಲಿದ್ದು, ದಶಮಂಟಪ, ಕರಗ ಸಮಿತಿ ಸೇರಿದಂತೆ ಉಪಸಮಿತಿಗಳಿಗೆ ಒದಗಿಸಲಾಗುವದು ಎಂದು ಹೇಳಿದರು.

ಪ್ರಮುಖರಾದ ಪಿ.ಡಿ. ಪೊನ್ನಪ್ಪ, ರಾಬಿನ್ ದೇವಯ್ಯ, ಕೆ.ಎಸ್. ರಮೇಶ್, ಟಿ.ಎಸ್. ಪ್ರಕಾಶ್, ಉಮೇಶ್, ಸುಬ್ರಮಣಿ, ಪ್ರಕಾಶ್ ಆಚಾರ್ಯ, ಅವರುಗಳು ಅಭಿಪ್ರಾಯ ವ್ಯಕ್ತಪಡಿಸಿ ಈ ಬಾರಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗುವವರಿಗೆ ಮಹತ್ತರ ಜವಾಬ್ದಾರಿಯಿದೆ. ನಗರಸಭೆ ಆಡಳಿತವಿಲ್ಲದ ಕಾರಣ ಜಿಲ್ಲಾಧಿಕಾರಿಗಳು ಸಮಿತಿ ಅಧ್ಯಕ್ಷರುಗಳಾಗಿರುತ್ತಾರೆ. ಹಾಗಾಗಿ ಸಂಪೂರ್ಣ ಜವಾಬ್ದಾರಿ ಕಾರ್ಯಾಧ್ಯಕ್ಷರ ಮೇಲಿರುತ್ತದೆ. ಅನುದಾನ ತರುವಲ್ಲಿಂದ ಹಿಡಿದು ಉತ್ಸವ ಆಚರಣೆಯ ಜವಾಬ್ದಾರಿಯಿದ್ದು, ಸಮರ್ಥರನ್ನು ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡುವದು ಒಳಿತೆಂಬ ಸಲಹೆ ನೀಡಿದರು.

ಇನ್ನುಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ನಾಲ್ಕು ಮಂದಿ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಾಲ್ಕು ಮಂದಿಯ ಹೆಸರುಗಳು ಸೂಚನೆಯಾಗಿವೆ.

ಸಭೆಯಲ್ಲಿ ಸಮಿತಿ ಉಪಾಧ್ಯಕ್ಷ ರತಿ ಕೇಶವ, ಕೆ.ಕೆ. ಮೋಹನ್, ಸುಬ್ರಮಣಿ, ಶಿವರಾಂ, ಸಮಿತಿ ಮಾಜಿ ಅಧ್ಯಕ್ಷ ರವಿಕುಮಾರ್ ಇನ್ನಿತರರಿದ್ದರು.

ಡಿಸಿಗೆ ಮನವಿ

ದಸರಾ ಆಚರಣೆಯ ಕುರಿತು ಕಾರ್ಯಸೂಚಿ ಸಿದ್ಧಪಡಿಸಲು ದಶ ದೇವಾಲಯಗಳ ಅಧ್ಯಕ್ಷರು, ಪದಾಧಿಕಾರಿಗಳು, ದಸರಾ ಸಮಿತಿಯ ಎಲ್ಲಾ ಗೌರವಾಧ್ಯಕ್ಷರುಗಳು, ದಶಮಂಟಪ ಸಮಿತಿಗಳ ಪದಾಧಿಕಾರಿಗಳು ಹಾಗೂ ಶಾಸಕರುಗಳ ಸಭೆಯನ್ನು ತುರ್ತಾಗಿ ಕರೆಯುವಂತೆ ಮಡಿಕೇರಿ ನಗರ ದಸರಾ ದಶಮಂಟಪ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಇಂದು ಸಮಿತಿಯ ನಿಯೋಗ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೇಟಿಯಾಗಿ ಮಡಿಕೇರಿ ದಸರಾ ಜನೋತ್ಸವ ಹಾಗೂ ದಶಮಂಟಪಗಳ ಶೋಭಾಯಾತ್ರೆಯ ಕುರಿತು ವಿವರಿಸಿತು.

ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವದೊಂದಿಗೆ ದಸರಾ ಹಬ್ಬಕ್ಕೆ ಚಾಲನೆ ನೀಡಲು ಇನ್ನು ಕೇವಲ ಒಂದು ತಿಂಗಳಷ್ಟೇ ಬಾಕಿ ಉಳಿದಿದ್ದು, ಅಗತ್ಯ ಸಿದ್ಧತೆಗಳು ಆಗಬೇಕಾಗಿದೆ. ಈ ಸಾಲಿನ ದಸರಾ ಉತ್ಸವದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಪ್ರಮುಖರ ಸಭೆ ನಡೆಸಿ ಕಾರ್ಯಸೂಚಿ ಪ್ರಕ್ರಿಯೆ ಆರಂಭಿಸಬೇಕೆಂದು ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದರು.

ಇದಕ್ಕೂ ಮೊದಲು ಕಾವೇರಿ ಕಲಾಕ್ಷೇತ್ರದಲ್ಲಿ ದಶಮಂಟಪ ಸಮಿತಿಯ ಪ್ರಥಮ ಸಭೆ ನಡೆಸಿ ತೆಗೆದುಕೊಂಡ ನಿರ್ಣಯದ ಬಗ್ಗೆ ಜಿಲ್ಲಾಧಿಕಾರಿಗೆ ತಿಳಿಸಿದರು. ದಸರಾವನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಹಕಾರ ನೀಡುವಂತೆ ಕೋರಿದರು.

ದಶಮಂಟಪ ಸಮಿತಿಯ ಅಧ್ಯಕ್ಷ ಸಿ.ಎಸ್. ರಂಜಿತ್‍ಕುಮಾರ್, ಉಪಾಧ್ಯಕ್ಷ ಎಂ.ರತಿಕೇಶನ್, ಕಾರ್ಯದರ್ಶಿ ಎಂ.ಎಲ್. ಸತೀಶ್, ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಅನಿತಾಪೂವಯ್ಯ ಮತ್ತಿತರ ಪದಾಧಿಕಾರಿಗಳು ಈ ಸಂದರ್ಭ ಹಾಜರಿದ್ದರು.

ಇಂದು ಬನ್ನಿ ನೆಡುವ ಕಾರ್ಯಕ್ರಮ

ನಗರದ ಬನ್ನಿ ಮಂಟಪದಲ್ಲಿ ಬನ್ನಿ ಗಿಡವನ್ನು ನೆಡುವ ಕಾರ್ಯಕ್ರಮವು ತಾ.24 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಎಲ್ಲಾ ದಶಮಂಟಪಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ನಾಲ್ಕು ಕರಗ ದೇವಸ್ಥಾನಗಳÀ ಅರ್ಚಕರು ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ದಶಮಂಟಪ ಸಮಿತಿಯ ಅಧ್ಯಕ್ಷ ಸಿ.ಎಸ್.ರಂಜಿತ್ ಕುಮಾರ್ ಮನವಿ ಮಾಡಿದ್ದಾರೆ.

ತಾ.27 ರಂದು ಸಭೆ

ದಶಮಂಟಪ ಸಮಿತಿಯ ದ್ವಿತೀಯ ಸಭೆಯು ತಾ.27 ರಂದು ಮಧ್ಯಾಹ್ನ 3.30 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಸಭೆಯಲ್ಲಿ 2019-20ನೇ ಸಾಲಿನ ನೂತನ ಕಾರ್ಯಾಧ್ಯಕ್ಷರು, ದಸರಾ ಉತ್ಸವದ ಉಪಾಧ್ಯಕ್ಷರು ಹಾಗೂ ಜಂಟಿ ಕಾರ್ಯದರ್ಶಿಗಳ ಆಯ್ಕೆ ನಡೆಯಲಿದ್ದು, ದೇವಾಲಯ ಸಮಿತಿಯ ಪದಾಧಿಕಾರಿಗಳು ಹೆಸರನ್ನು ಸೂಚಿಸುವ ಬಗ್ಗೆ ಚರ್ಚೆ ನಡೆಯಲಿದೆ. ಸಭೆಗೆ ದಶಮಂಟಪಗಳ ಮತ್ತು ಕರಗ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಾಗುವಂತೆ ರಂಜಿತ್ ಕುಮಾರ್ ಕೋರಿದ್ದಾರೆ.