ಗೋಣಿಕೊಪ್ಪಲು, ಆ.23: ಈ ಭಾರೀ ಸುರಿದ ಮಳೆಯ ರೌದ್ರ ನರ್ತನಕ್ಕೆ ಜಿಲ್ಲೆಯ ಹಲವೆಡೆ ಅನಾಹುತಗಳು ಸಂಭವಿಸಿದ್ದವು. ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೋರದಲ್ಲಿ ಹಿಂದೆಂದೂ ಕಾಣದ ಅನಾಹುತ ನಡೆದು ಹೋಗಿತ್ತು. ಹಲವು ಕುಟುಂಬಗಳು ಮಳೆಯ ರಭಸಕ್ಕೆ ಕೊಚ್ಚಿ ಹೋಗಿದ್ದವು. ಜಾನುವಾರುಗಳು ಸೇರಿದಂತೆ ಇಲ್ಲಿದ್ದ ಕಾಫಿ ತೋಟಗಳು ನೆಲದಡಿ ಹೂತು ಹೋದವು ಇಂತಹದೊಂದು ಗ್ರಾಮ ಇತ್ತೆಂಬ ಕುರುಹುಗಳೇ ಇಲ್ಲದಂತಾ ಗಿದೆ.
ತೋರ ಗ್ರಾಮದಲ್ಲಿ ಎನ್‍ಡಿ ಆರ್‍ಎಫ್ ತಂಡ ಆರಂಭದಿಂದಲೂ ಮಳೆಯಲ್ಲಿ ಕೊಚ್ಚಿಹೋದ ಕುಟುಂಬಗಳ ಕುರುಹುಗಳಿಗೆ ಶೋಧಕಾರ್ಯ ಮುಂದುವರೆಸುತ್ತಿದೆ. ದಿನಂಪ್ರತಿ ಇಟಾಚಿಗಳ ಸಹಾಯ ದಿಂದ ಭೂಮಿಯನ್ನು ಅಗೆದು ಶೋಧಕಾರ್ಯ ನಡೆಸುತ್ತಿದ್ದಾರೆ. ಬೆಟ್ಟದ ಸಾಲುಗಳಿಂದ ಕೂಡಿದ ಈ ಪ್ರದೇಶದ ಕೆಲವು ಭಾಗ ಸಂಪೂರ್ಣ ಹಾಳಾಗಿರುವದರಿಂದ ಈ ಭಾಗದಲ್ಲಿ ಮತ್ತೆ ಮನೆ ನಿರ್ಮಾಣ ಅಸಾಧ್ಯವಾಗಿದೆ.
ಆದರೆ ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಇರುವ ಬೆಳ್ಳಿಯಪ್ಪನ ಕುಟುಂಬಕ್ಕೆ ಮಳೆಯಿಂದ ಮನೆಗೆ ಯಾವದೇ ಅಪಾಯ ಸಂಭವಿಸಿಲ್ಲ. ಆದರೆ ಭತ್ತದ ಗದ್ದೆಗಳಿಗೆ ಭಾರೀ ಹಾನಿಯಾಗಿವೆ. ಈ ಭಾಗದಲ್ಲಿ ಬೆಳ್ಳಿಯಪ್ಪನ ಕುಟುಂಬದ ಏಕೈಕ ಮನೆ ಮಾತ್ರ ಉಳಿದುಕೊಂಡಿದೆ.
ತೋರದ ಈ ಪ್ರದೇಶ ಮಳೆಯಿಂದ ಮೇಲ್ಭಾಗದ ಬೆಟ್ಟ ಕುಸಿದ ಪರಿಣಾಮ ಮನೆಗಳು ಸೇರಿದಂತೆ ಈ ಭಾಗದಲ್ಲಿದ್ದ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿದು ಹೋಗಿದೆ. ವಿದ್ಯುತ್‍ನ ಕಂಬಗಳು ಮಣ್ಣಿನೊಳಗೆ ಸೇರಿಕೊಂಡಿವೆ. ಸದ್ಯದ ಪರಿಸ್ಥಿತಿಯಲ್ಲಿ ಈ ಭಾಗಕ್ಕೆ ವಿದ್ಯುತ್ ಸೌಕರ್ಯ ಕಲ್ಪಿಸುವದು ಸಾಧ್ಯವಾಗದ ಪರಿಸ್ಥಿತಿ. ಏಕೈಕ ಮನೆ ಉಳಿದಿರುವದರಿಂದ ಬೇರೆ ಮಾರ್ಗದಿಂದ ಈ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದೆ. ಆದರೆ ಅಲ್ಲಿಯವರೆಗೆ ಈ ಕುಟುಂಬ ಕತ್ತಲಿನಲ್ಲಿಯೇ ದಿನ ಕಳೆಯು ವಂತಾಗಿದೆ. ಸೀಮೆಎಣ್ಣೆ ದೀಪದಲ್ಲಿ ರಾತ್ರಿ ಕಳೆಯುತ್ತಿದ್ದ ಬೆಳ್ಳಿಯಪ್ಪನ ಕುಟುಂಬದ ಸಂಕಷ್ಟದ ಬಗ್ಗೆ ‘ಶಕ್ತಿ’ ವರದಿ ಪ್ರಕಟಿಸುವ ಮೂಲಕ ಬೆಳಕು ಚೆಲ್ಲಿತ್ತು.
‘ಶಕ್ತಿ’ಯಲ್ಲಿ ವರದಿ ಪ್ರಕಟವಾದ ನಂತರ ಬೆಳ್ಳಿಯಪ್ಪನ ಕುಟುಂಬಕ್ಕೆ ಸೋಲಾರ್ ದೀಪದ ವ್ಯವಸ್ಥೆ ನೀಡಲು ನಿರ್ಧರಿಸಿದ ಗೋಣಿಕೊಪ್ಪಲುವಿನ ರೋಟೇರಿಯನ್ ಮೂಡೇರ ಎಂ.ಗಣಪತಿ ಇದರ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವ ಮೂಲಕ ಮಾದರಿಯಾಗಿದ್ದಾರೆ.
ಇವರ ಸಹಕಾರವನ್ನು ಪಡೆದ ಗೋಣಿಕೊಪ್ಪ ರೋಟರಿ ಸಂಸ್ಥೆ ಬೆಳ್ಳಿಯಪ್ಪನ ಕುಟುಂಬದ ಮನೆಗೆ ಸೋಲಾರ್ ದೀಪ ನೀಡಲು ಮುಂದಾದರು. ಮನೆಯ 5 ಕೊಠಡಿಗಳಿಗೆ 32 ಸಾವಿರ ವೆಚ್ಚದಲ್ಲಿ ಸೋಲಾರ್ ದೀಪದ ವ್ಯವಸ್ಥೆ ಕಲ್ಪಿಸುವ ಮೂಲಕ ಬೆಳ್ಳಿಯಪ್ಪನ ಕುಟುಂಬಕ್ಕೆ ರಾತ್ರಿಯ ವೇಳೆಯಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಿದೆ. ಇದರಿಂದ ಸೀಮೆಎಣ್ಣೆ ದೀಪದ ಬೆಳಕಿನಲ್ಲಿದ್ದ ಬೆಳ್ಳಿಯಪ್ಪನ ಕುಟುಂಬಕ್ಕೆ ಸೋಲಾರ್ ಬೆಳಕು ಸಿಕ್ಕಿದಂತಾಗಿದೆ.
ಗೋಣಿಕೊಪ್ಪ ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೋಟರಿಯನ್ ಕಾಡ್ಯಮಾಡ ನೆವಿನ್ ಸಮ್ಮುಖದಲ್ಲಿ ತೋರ ದಲ್ಲಿರುವ ಬೆಳ್ಳಿಯಪ್ಪನ ಮನೆಗೆ ತೆರಳಿದ ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಪ್ರಮೋದ್ ಕಾಮತ್, ಡಾ.ಚಂದ್ರಶೇಖರ್, ತೀತರಮಾಡ ಮೋಹನ್, ಟಿ.ಯು.ನರೇಂದ್ರ, ಪಿ.ಬಿ.ಪೂಣಚ್ಚ, ಎಂ.ಎಂ.ಗಣಪತಿ, ಪವಿತ್ರನೆವಿನ್, ಸುಷ್ಮಚಂಗಪ್ಪ, ರಾಜೇಶ್ವರಿ ನರೇಂದ್ರ, ರೋಟೇರಿಯನ್ ಅರುಣ್ ತಮ್ಮಯ್ಯ, ಮುಂತಾದವರು ಬೆಳ್ಳಿಯಪ್ಪನ ಕುಟುಂಬದ ಕಷ್ಟದಲ್ಲಿ ಭಾಗಿಯಾಗುವ ಮೂಲಕ ಸೋಲಾರ್ ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದಾರೆ.
- ಚಿತ್ರ, ವರದಿ:ಹೆಚ್.ಕೆ.ಜಗದೀಶ್