ಪಾಲಿಬೆಟ್ಟ, ಆ. 23: ಇತ್ತೀಚೆಗೆ ಪಾಲಿಬೆಟ್ಟದ ಮಸ್ಕಲ್ ತೋಟದಲ್ಲಿ ಗಬ್ಬದ ಹಸುವನ್ನು ಗುಂಡಿಕ್ಕಿ ಕೊಂದು ಮಾಂಸ ಮಾಡಿ ಕ್ರೌರ್ಯ ಮೆರೆದ ಕೃತ್ಯವನ್ನು ಖಂಡಿಸಿ ಪಾಲಿಬೆಟ್ಟದಲ್ಲಿ ಗಣಪತಿ ಸೇವಾ ಮಿತ್ರ ಮಂಡಳಿ ಅಧ್ಯಕ್ಷ ಅಜಿತ್ ಕರುಂಬಯ್ಯ ನೇತೃತ್ವದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳಿಂದ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪಾಲಿಬೆಟ್ಟದ ದೇವಾಲಯದಿಂದ ಪ್ರಾರಂಭವಾದ ಪಂಜಿನ ಮೆರವಣಿಗೆ ಸಂಘ ಚಾಲಕ್ ಕುಟ್ಟಂಡ ಪ್ರಿನ್ಸ್ ಗಣಪತಿ ಚಾಲನೆ ನೀಡಿದರು. ಪಾಲಿಬೆಟ್ಟ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಗೋ ಹತ್ಯೆ ನಡೆಸಿದ ಹಂತಕರ ವಿರುದ್ಧ ಘೋಷಣೆ ಕೂಗಿದರು

ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿ. ಪಂ. ಸದಸ್ಯ ವಿಜು ಸುಬ್ರಮಣಿ ಮಾತೆಯ ಸ್ಥಾನದಲ್ಲಿದ್ದ ಗೋವನ್ನು ಹತ್ಯೆ ಮಾಡುವ ಮೂಲಕ ಕಟುಕರು ಮಾನವೀಯತೆಯ ಮರೆತಿದ್ದಾರೆ; ಬ್ರಿಟಿಷ್‍ರ ಕಾಲದಿಂದಲೂ ಜಿಲ್ಲೆಯಲ್ಲಿ ಗೋಹತ್ಯೆ ನಿಷೇಧವಿದ್ದರೂ ಇಂದು ರಾಜರೋಷವಾಗಿ ಗೋವಿನ ಹತ್ಯೆ ನಡೆಯುತಿದ್ದು ಇವರುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೋಲಿಸ್ ಇಲಾಖೆಯನ್ನು ಒತ್ತಾಯಿಸಿದರು. ಚಕ್ಕೆರ ಮನು ಕಾವೇರಪ್ಪ ಮಾತನಾಡಿ ಹಿಂದೂ ಸಂಸ್ಕೃತಿಯಲ್ಲಿ ಗೋವಿಗೆ ಪ್ರಮುಖ ಸ್ಥಾನವಿದೆ; ಅಂತಹ ಗೋವನ್ನು ಕಡಿದು ತಿನ್ನುವ ಮತಾಂಧರು ಕ್ರೌರ್ಯ ಮೆರೆಯುತಿದ್ದಾರೆ, ಜಿಲ್ಲೆಯಲ್ಲಿ ನಿರಂತರವಾಗಿ ಗೋ ಸಾಗಾಟ ಮತ್ತು ಹತ್ಯೆ ನಡೆಯುತಿದ್ದರೂ ಇಲಾಖೆ ಕೈ ಕಟ್ಟಿ ಕುಳಿತಿದ್ದು ಖಂಡಿಸುವದಾಗಿ ಹೇಳಿದರು.

ಜಿಲ್ಲಾ ಗೋ ರಕ್ಷಕ್ ಪ್ರಮುಖ್ ಕಂಠಿ ಕಾರ್ಯಪ್ಪ ಮಾತನಾಡಿ ಈ ಪವಿತ್ರ ಭೂಮಿಯಲ್ಲಿ ಇಂತಹ ಹೀನ ಕೃತ್ಯ ನಡೆದಿರುವದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು ಗೋಹತ್ಯೆ ಮಾಡುವ ಕಟುಕರು ಅದರ ತ್ಯಾಜಗಳನ್ನು ಪವಿತ್ರ ಕಾವೇರಿ ನದಿಯಲ್ಲಿ ಹಾಕಿ ನಮ್ಮ ಭಾವನೆಗಳನ್ನು ಕೆಣಕುತಿದ್ದಾರೆ ನಾವು ಎಲ್ಲಾವನ್ನು ಸಹಿಸುತ್ತೇವೆ ಎಂದು ನಮ್ಮ ಭಾವನೆಗಳನ್ನು ಕೆಣಕುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭ ಜಿ. ಪಂ.ಮಾಜಿ ಸದಸ್ಯ ಕೊಲ್ಲೀರ ಧರ್ಮಜ, ಕುಟ್ಟಂಡ ಅಜಿತ್ ಕರುಂಬಯ್ಯ ಸೇರಿದಂತೆ ಹಿಂದೂ ಪರ ಸಂಘಟನೆಯ ಪ್ರಮುಖರು ಕಾರ್ಯಕರ್ತರು ಇದ್ದರು. ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ಬೀಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

-ಚಿತ್ರ , ವರದಿ : ಪುತ್ತಂ ಪ್ರದೀಪ್