ಸಿದ್ದಾಪುರ, ಆ. 23: ಪ್ರವಾಹದಿಂದಾಗಿ ನದಿ ಸಮೀಪದಲ್ಲಿದ್ದ ಕರಡಿಗೋಡು ಅಂಗನವಾಡಿ ಕೇಂದ್ರ ಮುಳುಗಡೆಗೊಂಡು, ಬೃಹತ್ ಗಾತ್ರದ ಬಿರುಕುಬಿಟ್ಟು ಅಪಾಯದ ಸ್ಥಿತಿಯಲ್ಲಿದೆ.
ಜಿಲ್ಲಾದÀ್ಯಂತ ಸುರಿದ ಬಾರೀ ಮಳೆಗೆ ಕಾವೇರಿ ನದಿ ನೀರು ಏರಿಕೆಯಾಗಿ ನದಿ ದಡದಲ್ಲಿ ಪ್ರವಾಹ ಸಂಭವಿಸಿ, ನೂರಾರು ಮನೆಗಳು ನೆಲಕ್ಕುರುಳಿತ್ತು. ಈ ಪೈಕಿ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕರಡಿಗೋಡು ಗ್ರಾಮದ ಅಂಗನವಾಡಿ ಕೇಂದ್ರಕ್ಕೂ ಕಾವೇರಿ ನದಿಯ ನೀರು ತುಂಬಿದ್ದು, ಅಂಗನವಾಡಿಯು ಬಹುತೇಕ ಮುಳುಗಡೆಗೊಂಡಿತ್ತು. ನದಿ ನೀರು ಇಳಿಯುವ ಸಂದರ್ಭ ಅಂಗನವಾಡಿಯ ಒಳ ಹಾಗೂ ಹೊರ ಬಾಗದಲ್ಲಿ ಬೃಹತ್ ಗಾತ್ರದ ಬಿರುಕುಗಳು ಬಿಟ್ಟಿದ್ದು, ಇದೀಗ ಅಂಗನವಾಡಿಯು ಅಪಾಯದ ಸ್ಥಿತಿಯಲ್ಲಿದೆ. ಒಳಭಾಗದ ನೆಲ ಹಾಗೂ ಗೋಡೆಯಲ್ಲಿ ಬಿರುಕುಬಿಟ್ಟಿದ್ದು, ಹಿಂಭಾಗದ ಗೋಡೆ ಕುಸಿದಿದೆ. ಅಡುಗೆ ತಯಾರಿಸುವ ಕೋಣೆಯ ಹಿಂಬಾಗ ಕುಸಿದಿದ್ದು, ಇದೀಗ ಅಪಾಯದ ಸ್ಥಿತಿಯಲ್ಲಿದೆ.
ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಇಲಾಖೆ ಬಾಡಿಗೆಗೆ ಕೊಠಡಿ ಪಡೆದು ಅಂಗನವಾಡಿ ನಡೆಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಇಲಾಖೆ ತಿಂಗಳಿಗೆ ಅಂಗನವಾಡಿ ಕೇಂದ್ರದ ಕೊಠಡಿ ಬಾಡಿಗೆಯಾಗಿ ಕೇವಲ 1000 ರೂ ನೀಡುತ್ತಿದ್ದು, ನೂರಾರು ಮನೆ ಕಳೆದುಕೊಂಡ ನಿರಾಶ್ರಿತರಿಗೆ ಬಾಡಿಗೆ ಮನೆ ಸಿಗದಿರುವ ಸಂದರ್ಭ ಅಂಗನವಾಡಿಗೆ ಕಡಿಮೆ ಹಣಕ್ಕೆ ಕೊಠಡಿ ಲಭ್ಯವಾಗಲಿದೆಯೇ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಸಂಬಂಧಪಟ್ಟ ಇಲಾಖೆಯೇ ಅಂಗನವಾಡಿಗೆ ಸೂಕ್ತ ಕೊಠಡಿಯನ್ನು ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.