ಸೋಮವಾರಪೇಟೆ, ಆ. 23: ಸಮೀಪದ ಹೊಸಳ್ಳಿ ಗ್ರಾಮದ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಕಳೆದ 15 ದಿನಗಳ ಹಿಂದೆ ಕಾಣೆಯಾಗಿದ್ದ ಅದೇ ಗ್ರಾಮದ ಕೂಲಿ ಕಾರ್ಮಿಕ ಅಪ್ಪು ಅವರ ಮೃತದೇಹ ಎಂದು ಗುರುತಿಸಲಾಗಿದೆ.

ಕಳೆದ 15 ದಿನಗಳ ಹಿಂದೆ ಕೂಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಸಂದರ್ಭ ಹೊಳೆಯಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿರ ಬಹುದು ಎಂದು ಸಂಶಯಿಸಲಾಗಿದ್ದು, ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಮತ್ತು ಠಾಣಾಧಿಕಾರಿ ಶಿವಶಂಕರ್ ಸೇರಿದಂತೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಅಪ್ಪು ಅವರು ಕಳೆದ 15 ದಿನಗಳಿಂದ ಕಾಣೆಯಾಗಿದ್ದು, ಸ್ಥಳೀಯರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ನಿನ್ನೆ ಸಂಜೆ ವೇಳೆಗೆ ಹೊಳೆಯ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹವೊಂದು ಕಂಡುಬಂದ ಹಿನ್ನೆಲೆ ಸೋಮವಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳ ಪರಿಶೀಲನೆಯ ನಂತರ ಅಪ್ಪು ಅವರದೇ ಮೃತದೇಹ ಎಂದು ಗುರುತಿಸಲಾಗಿದೆ. ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಹೊರತೆಗೆದು ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಭಾರೀ ಮಳೆಯಾಗುತ್ತಿದ ಹಿನ್ನೆಲೆ ಹೊಸಳ್ಳಿ ಹೊಳೆ ತುಂಬಿ ಹರಿಯುತ್ತಿತ್ತು. ಹೀಗಾಗಿ ಮೃತದೇಹ ಮರದ ಬೇರಿಗೆ ಸಿಲುಕಿಕೊಂಡಿತ್ತು. ಇದೀಗ ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿರುವ ಹಿನ್ನೆಲೆ ಮೃತದೇಹ ಗೋಚರಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೃತ ಅಪ್ಪು ಅವರು ಕಳೆದ 2 ವರ್ಷಗಳಿಂದ ಹೊಸಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದು, ಗ್ರಾಮದ ಹೊಲ, ತೋಟಗಳಿಗೆ ಕೂಲಿಗಾಗಿ ತೆರಳುತ್ತಿದ್ದರು. ಇವರ ಪತ್ನಿ ಅಕ್ಕಮ್ಮ ಮತ್ತು ಈರ್ವರು ಪುತ್ರಿಯರು ಹುದುಗೂರು ಗ್ರಾಮದಲ್ಲಿ ನೆಲೆಸಿದ್ದಾರೆ.