ಕೂಡಿಗೆ, ಆ. 23: ಕಳೆದ ಒಂದು ವಾರದ ಹಿಂದೆ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿ ಬೆಳೆಯನ್ನು ಬೆಳೆಯಲಾಗಿದ್ದ ಕೃಷಿ ಭೂಮಿ, ಮನೆಗಳು ಎಲ್ಲವೂ ಪ್ರವಾಹಕ್ಕೆ ತುತ್ತಾಗಿ ನಷ್ಟವಾಗಿವೆ. ಜಿಲ್ಲೆಯಲ್ಲಿ ನಾಶವಾದ ಮನೆಗಳ ಸಮೀಕ್ಷೆ ನಡೆಸಿ ವರದಿಯು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ತಲಪಿದ್ದರೂ, ಕೃಷಿ ಇಲಾಖೆಯಿಂದ ಅಂದಾಜಿನಲ್ಲಿ ಪಟ್ಟಿ ಮಾಡಿ ತಿಳಿಸಿದ್ದಾರೆ ವಿನಃ ಇನ್ನೂ ನಾಶವಾದ ಬೆಳೆಗಳ ಸಮೀಕ್ಷೆ ಕಾರ್ಯವೇ ಪ್ರಾರಂಭವಾಗಿಲ್ಲ.

ರೈತರು ಮಳೆಯಿಲ್ಲದೆ, ಅಲ್ಪಸ್ವಲ್ಪ ಸುರಿದ ಸ್ವಲ್ಪ ಪ್ರಮಾಣದ ಮಳೆಯಲ್ಲಿಯೇ ಬೆಳೆಯನ್ನು ಬೆಳೆಯುತ್ತಿದ್ದರು. ದಿಢೀರನೆ ಸುರಿದ ಭಾರಿ ಮಳೆಗೆ ಪ್ರವಾಹವೇ ಉಂಟಾಗಿ ಜಮೀನಲ್ಲಿ ಬೆಳೆಯಲಾಗಿದ್ದ ಬೆಳೆಗಳೆಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿ, ಜಲಾವೃತವಾಗಿದ್ದ ಪ್ರದೇಶದಲ್ಲಿ ಕೊಳೆತು ಸಂಪೂರ್ಣ ನಷ್ಟವುಂಟಾಯಿತು.

ರೈತರು ಸಹಕಾರ ಸಂಘಗಳಲ್ಲಿ ಸಾಲ ಮಾಡಿ, ಬಿತ್ತನೆ ಬೀಜ ತಂದು ಜೋಳ, ವಾಣಿಜ್ಯ ಬೆಳೆಯಾದ ಶುಂಠಿಯನ್ನು ಬಿತ್ತನೆ ಬೀಜ ಒಂದು ಚೀಲಕ್ಕೆ 4000 ರಿಂದ 5000 ರೂ. ಗಳಲ್ಲಿ ಕೊಂಡು ಬಿತ್ತನೆ ಮಾಡಿ, ಭತ್ತದ ಬಿತ್ತನೆ ಮಾಡಿ ಸಸಿ ಮಡಿಗಳನ್ನು ಮಾಡಿ, ನಾಟಿ ಮಾಡಿ ಬೆಳೆಯನ್ನು ಪೋಷಿಸುತ್ತಿದ್ದರು. ಬೆಳೆ ಬಂದ ಮೇಲೆ ಮಾರಾಟ ಮಾಡಿ ಬಂದ ಹಣದಲ್ಲಿ ಸಾಲಗಳನ್ನು ತೀರಿಸಿಕೊಂಡು ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಜೀವನವನ್ನು ಸುಧಾರಿಸಿಕೊಳ್ಳಬೇಕು ಎಂದುಕೊಂಡಿದ್ದ ರೈತರನ್ನು ಪ್ರವಾಹವು ಸಂಕಷ್ಟದಲ್ಲಿರಿಸಿದೆ.

ಬೆಳೆಹಾನಿಯಾಗಿ ಒಂದು ವಾರವೇ ಕಳೆದರೂ ಅಧಿಕಾರಿಗಳು ರೈತರ ಜಮೀನಿಗೆ ಬಂದು ಪರಿಹಾರ ಸಮೀಕ್ಷೆಯನ್ನೂ ಕೂಡ ನಡೆಸಿಲ್ಲ. ಇತ್ತ ರೈತರು ಪರಿಹಾರಕ್ಕಾಗಿ ಕಾಯಬೇಕೋ, ಮರು ಬೆಳೆಯನ್ನು ಬೆಳೆಯಲು ಸಿದ್ಧರಾಗಬೇಕೋ ಎಂಬ ಗೊಂದಲದಲ್ಲಿದ್ದಾರೆ. ಏಕೆಂದರೆ ಇದೀಗ ನಾಟಿ ಮಾಡಿದ ಭತ್ತದ ಗದ್ದೆಗಳಲ್ಲಿ ಪೈರುಗಳು ಭಾರಿ ನೀರಿಗೆ ಕೊಚ್ಚಿಹೋಗಿದ್ದು, ಜೋಳದ ಬೆಳೆಯು ನೆಲಕಚ್ಚಿ ಕೊಳೆತು ಹೋಗಿವೆ. ಬೆಳೆ ನಾಶವಾಗಿರುವ ಕೃಷಿ ಭೂಮಿಯನ್ನು ಪುನರ್ ಉಳುಮೆ ಮಾಡಿ, ಭತ್ತದ ಸಸಿ ಮಡಿಗಳನ್ನು ಖರೀದಿಸಿ ನಾಟಿ ಮಾಡಲು ಸಿದ್ಧ ಪಡಿಸಿಕೊಂಡರೆ ಮುಂದೆ ಪರಿಹಾರ ಸಮೀಕ್ಷೆಗೆ ಬಂದರೇ ಈ ಸ್ಥಳದಲ್ಲಿ ಪ್ರವಾಹವಾಗಿತ್ತೊ ಇಲ್ಲವೋ ಎಂಬ ಅನುಮಾನವಿರುತ್ತದೆ.

ರೈತರು ಸಂಬಂಧಪಟ್ಟ ಕೃಷಿ ಇಲಾಖೆಗೆ ಮತ್ತು ಕಂದಾಯ ಇಲಾಖೆಗೆ ಹೋಗಿ ಪರಿಹಾರ ಒದಗಿಸುವಂತೆ ಮನವಿ ಮಾಡಿದರೆ, ಅಧಿಕಾರಿಗಳ್ಯಾರೂ ಇದುವರೆಗೂ ಸ್ಥಳಕ್ಕೆ ಬಂದು ಪರಿಹಾರ ಸಮೀಕ್ಷೆಯನ್ನೇ ನಡೆಸಿಲ್ಲ. ತಾಂತ್ರಿಕ ಯೋಜನೆಯಂತೆ ಕಂಪ್ಯೂಟರ್ ಸಮೀಕ್ಷೆಯನ್ನು ಅಧಿಕಾರಿ ನಡೆಸಲು, ಅಥವಾ ಲಿಖಿತವಾಗಿ ಸಮೀಕ್ಷೆ ನಡೆಸಲು ಯಾವದೇ ಆದೇಶ ಸರ್ಕಾರದಿಂದ ಬಂದಿರದ ಹಿನ್ನೆಲೆಯಲ್ಲಿ ಯಾವ ಅಧಿಕಾರಿಗಳು ಸಹ ಸಮೀಕ್ಷೆ ನಡೆಸಲು ಮುಂದಾಗಿಲ್ಲ ಎಂಬದು ತಿಳಿದು ಬಂದಿಲ್ಲ.

ಈ ಹಿನ್ನೆಲೆಯಲ್ಲಿ ರೈತರು ಪರಿಹಾರಕ್ಕೆ ಕಾಯುವದೋ ಮರು ಬೆಳೆ ಮಾಡುವದೊ ಎಂಬ ಗೊಂದಲದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಪಸ್ವಲ್ಪ ಬೆಳೆ ಬಂದಲ್ಲಿ ಜೀವನ ನಡೆಸಲು ಸಹಾಯವಾಗುತ್ತದೆ ಎಂಬ ಮುಂದಾಲೋಚನೆಯಿಂದ ಮರು ಬೆಳೆ ಮಾಡುವದು ರೈತರಿಗೆ ಅಗತ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸವೇ ನಡೆಸಿ ಹಾನಿಯಾಗಿರುವ ಕೃಷಿ ಭೂಮಿಗಳ ಮಾಹಿತಿ ಪಡೆದು ರೈತರಿಗೆ ಸೂಕ್ತ ಪರಿಹಾರ ಒದಗಿಸಿ ಸಹಕಾರಿಯಾಗಬೇಕು ಎಂದು ರೈತರ ಒತ್ತಾಯವಾಗಿದೆ.

-ಕೆ.ಕೆ.ನಾಗರಾಜಶೆಟ್ಟಿ