ಕೊಡವ ಮಕ್ಕಡ ಕೂಟ ಅಸಮಾಧಾನ
ಮಡಿಕೇರಿ, ಆ. 23: ನೂತನವಾಗಿ ರಚನೆಯಾಗಿರುವ ರಾಜ್ಯ ಸಚಿವ ಸಂಪುಟದಲ್ಲಿ ಕೊಡವ ಜನಾಂಗದವರಿಗೆ ಪ್ರಾತಿನಿಧ್ಯ ನೀಡದೇ ಇರುವ ಕ್ರಮ ಸರಿಯಲ್ಲ ಎಂದು ಕೊಡವ ಮಕ್ಕಡ ಕೂಟ ಅಸಮಾಧಾನ ವ್ಯಕ್ತ ಪಡಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ ಹಾಗೂ ಪದಾಧಿಕಾರಿಗಳು, ಬಹು ಕುತೂಹಲದಿಂದ ಕೂಡಿದ ರಾಜ್ಯ ಸಚಿವ ಸಂಪುಟ ರಚನೆಯಾಗಿದೆ. ಘಟನಾಘಟಿಗಳನ್ನು ಮೀರಿ, ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ, ಕೆಲವರು ಮಂತ್ರಿ ಪಟ್ಟ ಪಡೆದುಕೊಂಡಿದ್ದಾರೆ. ಪಕ್ಷದ ಮುಖಂಡರು ಎನಿಸಿಕೊಂಡವರು ಅಳೆದು ತೂಗಿ ಕೆಲವರಿಗೆ ಮಂತ್ರಿಗಿರಿ ಪಟ್ಟ ನೀಡಿದ್ದಾರೆ.
ಹಲವು ವರ್ಷಗಳಿಂದ ಕೊಡವರನ್ನು ಸೂಕ್ತ ಸ್ಥಾನಕ್ಕೆ ಪರಿಗಣಿಸಲಾಗುತ್ತಿಲ್ಲ. ಸದ್ಯ ಸಚಿವ ಸ್ಥಾನದಲ್ಲಿ ಕೊಡವರಿಗೆ ಯಾವದೇ ಸ್ಥಾನಮಾನ ನೀಡದೇ ಇರುವದು ವಿಷಾದನೀಯ. ಸಚಿವ ಸಂಪುಟದಲ್ಲಿ 8 ಲಿಂಗಾಯಿತರು, 3 ಒಕ್ಕಲಿಗರು, 3 ಪರಿಶಿಷ್ಟ ಜಾತಿಯವರು, 2 ಒಬಿಸಿ, 1 ಪರಿಶಿಷ್ಠ ಪಂಗಡದವರು ಹಾಗೂ 1 ಬ್ರಾಹ್ಮಣರಿಗೆ ಪ್ರಾತಿನಿಧ್ಯ ನೀಡಲಾಗಿದೆ. ಹೀಗಿರುವಾಗ ಬುಡಕಟ್ಟು ಜನಾಂಗದವರು ಎಂದು ಗುರುತಿಸಿಕೊಂಡಿರುವ ಕೊಡವರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ನೀಡದೇ ಇರುವದು ಸೂಕ್ತವಲ್ಲ ಎಂದರು. 2012 ರಲ್ಲಿ ಬಿಜೆಪಿ ಸರಕಾರ ಇದ್ದಾಗ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಮಂತ್ರಿಮಂಡಲದಲ್ಲಿ ಶಾಸಕ ಮಂಡೆಪಂಡ ಅಪ್ಪಚ್ಚು ರಂಜನ್ ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆಯ ಮಂತ್ರಿ ಆಗಿದ್ದರು. ನಂತರ ಸರಕಾರ ಬದಲಾದ ನಂತರ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂತು; ಈ ಅವಧಿಯಲ್ಲೂ ಕೂಡ ಕಾಂಗ್ರೆಸ್ ಸರಕಾರ ಕೊಡವರನ್ನು ಕಡೆಗಣನೆ ಮಾಡಿದೆ. ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರಿಗೆ ಸಂಪುಟದಲ್ಲಿ ಯಾವದೇ ಸ್ಥಾನ ನೀಡಲಾಗಿಲ್ಲ. ನಂತರದ ಮೈತ್ರಿ ಸರಕಾರದಲ್ಲೂ ಇವರಿಗೆ ಸ್ಥಾನ ದೊರೆಯಲಿಲ್ಲ. ಇದನೆಲ್ಲ ಗಮನಿಸಿದಾಗ ರಾಜ್ಯದಲ್ಲಿ ಯಾವದೇ ಪಕ್ಷ ಅಧಿಕಾರಕ್ಕೆ ಬಂದರೂ ಕೊಡವರಿಗೆ ಹೆಚ್ಚಿನ ಸ್ಥಾನ ದೊರಕುತ್ತಿಲ್ಲ ಎಂದು ಮಕ್ಕಡ ಕೂಟ ಹೇಳಿದೆ.
2ನೇ ಪಟ್ಟಿಯಲ್ಲಾದರೂ ಕೊಡವ ಜನಾಂಗದವರಿಗೆ ಸಚಿವ ಸಂಪುಟದಲ್ಲಿ ಆದ್ಯತೆ ನೀಡಬೇಕು ಎಂದು ಕೊಡವ ಮಕ್ಕಟ ಕೂಟ ಒತ್ತಾಯಿಸಿದೆ.