ವೀರಾಜಪೇಟೆ, ಆ.23:ಹಾಸನ, ಪಿರಿಯಾಪಟ್ಟಣ, ಕುಶಾಲನಗರ ವೀರಾಜಪೇಟೆ ಮಾಕುಟ್ಟ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿದ್ದು ಸದ್ಯದಲ್ಲಿಯೇ ಮಾಕುಟ್ಟದ ಹೆದ್ದಾರಿ ರಸ್ತೆಯ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗುವದು. ನಂತರ ಎಲ್ಲ ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೊಡಲಾಗುವದು ಎಂದು ಕೊಡಗು -ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದರು. ಅವರು ಇಂದು ಲೋಕೋಪಯೋಗಿ ಅಧಿಕಾರಿಗಳೊಂದಿಗೆ ಮಾಕುಟ್ಟದಲ್ಲಿ ದುರಸ್ತಿಗೊಂಡಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇಲಾಖೆಯ ಅಧಿಕಾರಿಗಳ ಸಲಹೆಯಂತೆ ಕೆಲವು ಮೀಟರ್ಗಳವರೆಗೆ ಪಕ್ಕದ ಅರಣ್ಯವನ್ನು ರಸ್ತೆಗೆ ಅಗತ್ಯವಿರುವಷ್ಟು ಬಳಸಿಕೊಂಡು ಹೆದ್ದಾರಿ ರಸ್ತೆ ದುರಸ್ತಿ ಪಡಿಸಲಾಗುವದು. ಇದಕ್ಕಾಗಿ ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಮಾತುಕತೆ ನಡೆಸಲಾಗವದು. ಭಾರೀ ಮಳೆಯ ಪರಿಣಾಮ ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟದಲ್ಲಿ ಆಗಿಂದಾಗ್ಗೆ ರಸ್ತೆ ಬದಿ ಕುಸಿಯುವದರೊಂದಿಗೆ ಬಿರುಕು ಕಾಣಿಸಿಕೊಳ್ಳುತ್ತಿರುವದು ವಿಪರ್ಯಾಸ. ಇದಕ್ಕಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ತಂತ್ರಜ್ಞರ ಸಲಹೆ ಪಡೆದು ಶಾಶ್ವತ ಪರಿಹಾರ ಕಂಡು ಹಿಡಿಯಲಾಗುವದು ಎಂದರು.
ಸಂಸದರ ಜೊತೆಯಲ್ಲಿ ಇಲಾಖೆಯ ಸಹಾಯಕ ಅಭಿಯಂತರ ಸುರೇಶ, ಯತೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಗಣಪತಿ, ತಾಲೂಕು ತಹಶೀಲ್ದಾರ್ ಪುರಂದರ, ಕಂದಾಯ ಅಧಿಕಾರಿಗಳು ಹಾಜರಿದ್ದರು.