ಸೋಮವಾರಪೇಟೆ, ಆ. 23: ವೃಕ್ಷ ಸಂಕುಲದ ಸಂರಕ್ಷಣೆಯಿಂದ ಮಾತ್ರ ಮನುಕುಲದ ಉಳಿವು ಸಾಧ್ಯ ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕು. ಆ ದಿಸೆಯಲ್ಲಿ ಪರಿಸರದ ರಕ್ಷಣೆಗೆ ಮುಂದಾಗಬೇಕು ಎಂದು ಸಿದ್ಧಲಿಂಗಪುರ ಅರಸಿನಗುಪ್ಪೆ ಶ್ರೀ ಮಂಜುನಾಥ ದೇವಾಲಯದ ಶ್ರೀರಾಜೇಶ್‍ನಾಥ್ ಗುರೂಜಿ ಅಭಿಪ್ರಾಯಿಸಿದರು. ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮರಗಿಡಗಳನ್ನು ಉಳಿಸಿ ಬೆಳೆಸುವ ಸಂಕಲ್ಪವನ್ನು ಎಲ್ಲರೂ ತೊಡಬೇಕಿದೆ. ಮುಂದಿನ ಮನುಕುಲದ ಉಳಿವಿಗಾಗಿ ಪರಿಸರ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕಿದೆ ಎಂದರು.

ಮಕ್ಕಳಲ್ಲಿಯೇ ಪ್ರಕೃತಿಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಗಿಡಮರಗಳ ಮಹತ್ವವನ್ನು ತಿಳಿಸಬೇಕು ಎಂದ ರಾಜೇಶ್‍ನಾಥ್ ಗುರೂಜಿ ಅವರು, ಹವಾಮಾನ ವೈಪರೀತ್ಯದಿಂದಾಗಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿದ್ದು, ಪರಿಸರ ಮತ್ತು ಮಾನವನ ಜೀವನ ಕ್ರಮದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಅಭಿಪ್ರಾಯಿಸಿದರು.

ಪರಿಸರ ದಿನಾಚರಣೆಯ ಅಂಗವಾಗಿ ದೇವಾಲಯದ ಆವರಣದಲ್ಲಿ ತೆಂಗು, ನೆಲ್ಲಿಕಾಯಿ, ಹಲಸು, ಕಾಡು ಬಾದಾಮಿ, ಹೊಂಗೆ ಸೇರಿದಂತೆ ವಿವಿಧ ಜಾತೀಯ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕಿಶೋರ್‍ಕುಮಾರ್, ರವಿಕುಮಾರ್, ಪ್ರಮುಖರಾದ ಸುರೇಶ್‍ಕುಮಾರ್, ರಾಮು, ಮಂಜುನಾಥ್, ಪುಟ್ಟರಾಜು, ಬಬಿನ್ ರೈ, ಪುನೀತ್, ದೇವಾಲಯ ಸಮಿತಿ ಪದಾಧಿಕಾರಿಗಳು, ಗಣಪತಿ ಯುವಕ ಸಂಘದ ಸದಸ್ಯರುಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.