ವೀರಾಜಪೇಟೆ, ಆ. 22: ಪ್ರಕೃತಿ ವಿಕೋಪ, ಜಲ ಪ್ರವಾಹದಲ್ಲಿ ಉಂಟಾದ ಹಾನಿಗಳಿಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಸಕರಾತ್ಮಕವಾಗಿ ಸ್ಪಂದಿಸುತ್ತಿದೆ. ಯಾರು ಆತಂಕ ಪಡುವದು ಬೇಡ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಪಟ್ಟಣದ ನೆರೆ ಸಂತ್ರಸ್ತರಿಗೆ ಪಂಚಾಯಿತಿ ಸಭಾಂಗಣದಲ್ಲಿ ಪರಿಹಾರ ವಿತರಣೆ ಮಾಡಿ ಮಾತನಾಡಿ ಪ್ರಾರಂಭದಲ್ಲಿ 3800 ರೂ.ಗಳನ್ನು ವಿತರಿಸಲಾಗುತ್ತಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಬಳಿಕ ಸರ್ಕಾರ 10 ಸಾವಿರ ಪರಿಹಾರ ನೀಡುತ್ತಿದೆ. ಸಂಪೂರ್ಣ ಮನೆ ಹಾನಿ ಆದವರಿಗೆ 3 ಲಕ್ಷ ನೀಡಲಾಗುವದು. ಭಾಗಶಃ ಹಾನಿ ಆದವರಿಗೆ 1 ಲಕ್ಷ ಪರಿಹಾರ ನೀಡಲಾಗುವದು. ಹಲವಾರು ಕಡೆಗಳಲ್ಲಿ ಪ್ರವಾಹ ಬಂದು ಹಾಳಾಗಿರುವ ಮಕ್ಕಳ ಶಾಲಾ ಪುಸ್ತಕಗಳು, ಸಮವಸ್ತ್ರಗಳನ್ನು ಒಂದು ತಿಂಗಳಲ್ಲಿ ವಿತರಿಸಲಾಗುವದು. ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರ ಪರಿಹಾರ ಹಣ ನೀಡಲಾಗುವದು ಎಂದು ಹೇಳಿದರು.

ವೇದಿಕೆಯಲ್ಲಿ ಪಂಚಾಯತಿ ಆಡಳಿತಾಧಿಕಾರಿ ತಹಶೀಲ್ದಾರ್ ಪುರಂದರ, ಅಭಿಯಂತರ ಹೇಮ್‍ಕುಮಾರ್ ಪಟ್ಟಣ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.