ವೀರಾಜಪೇಟೆ, ಆ. 21: ಕೊಡಗಿನಲ್ಲಿ ಘಟಿಸಿದ ಭೀಕರ ಜಳಪ್ರಳಯದಲ್ಲಿ ತುತ್ತಾದ ಸಂತ್ರಸ್ತ ಕುಟುಂಬಗಳಿಗೆ ಸಾಮಾಜಿಕ ಕಳಕಳಿಯಿಂದ ಖಾಸಗಿ ಕಂಪೆನಿಯೊಂದು ದಿನ ಬಳಕೆಯ ಸಾಮಗ್ರಿಗಳನ್ನು ನೀಡಿತು.
ವೀರಾಜಪೇಟೆ ಹೆಗ್ಗಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಶ್ರಯ ಪಡೆದ ಸಂತ್ರಸ್ತ ಕುಟುಂಬಗಳಿಗೆ ಬೆಂಗಳೂರು ಮೂಲದ ಕಾರ್ಸ್ 24 ಖಾಸಗಿ ಸಂಸ್ಥೆಯು ವೀರಾಜಪೇಟೆ ನಗರದ ಜೆಡಿಎಸ್ ಅಧ್ಯಕ್ಷ ಪಿ.ಎ. ಮಂಜುನಾಥ್ ಮತ್ತು ಸಂಗಡಿಗರೊಂದಿಗೆ ಹೆಗ್ಗಳ ನಿರಾಶ್ರಿತರ ಕೇಂದ್ರಕ್ಕೆ ತೆರಳಿ ದಿನ ಬಳಕೆಯ ವಸ್ತುಗಳಾದ ಹೊದಿಕೆ, ಸೀರೆ, ರವಿಕೆ, ಪಂಚೆ, ಮಕ್ಕಳ ಉಡುಪುಗಳು ಮತ್ತು ಇತರ ವಸ್ತುಗಳನ್ನು ನೀಡಿದರು.
ಕೇಂದ್ರದಲ್ಲಿ ಒಟ್ಟು 548 ಮಂದಿ ಅಶ್ರಯ ಪಡೆದಿದ್ದಾರೆ ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಕಾರ್ಸ್ 24 ಸಂಸ್ಥೆಯ ಗೋಕುಲ್ ಅವರು ಕೊಡಗು ಜಿಲ್ಲೆಯು ಜಲಪ್ರಳಯದಿಂದ ತತ್ತರಿಸಿಹೊಗಿದೆ; ಮಾನವಿತೆಯಿಂದ ನಗರದ ಕೆಲವು ದಾನಿಗಳಿಂದ ದಿನ ಬಳಕೆಯ ಸಾಮಗ್ರಿಗಳನ್ನು ಸಂಗ್ರಹಿಸಿ ಸಂತ್ರಸ್ತ ಕುಟುಂಬಗಳಿಗೆ ನೀಡಲಾಗುತ್ತಿದೆ ಸಂಕಷ್ಟದಲ್ಲಿರುವವರಿಗೆ ಸಹಾಯ ನೀಡುವದು ಮಾನವ ಧರ್ಮ ಎಂದು ಹೇಳಿದರು.
ಅಲ್ಲದೆ ವೀರಾಜಪೇಟೆ ಸರ್ಕಾರಿ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವ ತೋರ ಕೊರ್ತಿಕಾಡು ನಿವಾಸಿ ಕೆ.ಅರ್. ರಾಜು ಅವರ ಪುತ್ರ ಸತೀಶ್ ಕೆ.ಆರ್. ಅವರಿಗೆ ವಸ್ತ್ರಗಳನ್ನು ನೀಡಿದರು. ತೋರದ ಭೂಕುಸಿತದಲ್ಲಿ ಇವರು ತಮ್ಮ ಮನೆ ಕಳೆದುಕೊಂಡು ತಮ್ಮ ಬಲಗಾಲು ಗಾಯಗೊಂಡಿದ್ದು, ವೀರಾಜಪೇಟೆ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಗ್ರಿಗಳ ವಿತರಣೆಯ ಸಂದರ್ಭ ಸಂಸ್ಥೆಯ ಅಭಿಷೇಕ್ ನಿಕೇಶ್, ದೀಪಕ್ ಮುನ್ನ ಬಾಳೆಕುಟ್ಟಿರ ದಿನಿ ಬೋಪಣ್ಣ, ಯೋಗೇಶ್ ನಾಯ್ಡು ಮತ್ತು ಕೇಂದ್ರದ ನೋಡೆಲ್ ಅಧಿಕಾರಿ ಹಾಜರಿದ್ದರು.