ಚೆಟ್ಟಳ್ಳಿ, ಆ. 21: ನದಿ ದಡಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಆಸ್ತಿ ಪಾಸ್ತಿಗಳು ಪ್ರವಾಹದಿಂದ ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಹಿನ್ನೆಲೆ ಸರಕಾರ ಹಾಗೂ ಜಿಲ್ಲಾಡಳಿತ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಜಿಲ್ಲಾ ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಒತ್ತಾಯಿಸಿದ್ದಾರೆ.

ನಮ್ಮ ಕೊಡಗು ತಂಡದ ನೇತೃತ್ವದಲ್ಲಿ ಕನ್ನಡ ಕಥಾಗುಚ್ಛ ಸಾಹಿತ್ಯ ಬಳಗ ಮತ್ತು ದಯಾನಂದ್ ಸಾಗರ್ ಕಾಲೇಜು ವಿದ್ಯಾರ್ಥಿಗಳ ಸಹಕಾರದಿಂದ ಕರಡಿಗೋಡು, ಕೊಂಡಂಗೇರಿ, ಬೇತ್ರಿ, ಬಲಮುರಿ ಸೇರಿದಂತೆ ವಿವಿಧ ನದಿ ದಡದ ಗ್ರಾಮಗಳ ಸಂತ್ರಸ್ತರಿಗೆ ಪರಿಹಾರ ಕಿಟ್‍ಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ ಸಂತ್ರಸ್ತರಾಗಿರುವ ಅದೆಷ್ಟೋ ಕುಟುಂಬಗಳನ್ನು ಶಾಶ್ವತ ಯೋಜನೆಗಳ ಮೂಲಕ ಮುಂದೆ ತರಬೇಕೆಂದ ಅವರು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ನಮ್ಮ ಕೊಡಗು ತಂಡ ಸಮಾಜಮುಖಿ ಕಾರ್ಯಗಳೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂತ್ರಸ್ತರಿಗೆ ನೆರವಾಗುತ್ತಿದೆ ಎಂದರು.

ನಮ್ಮ ಕೊಡಗು ತಂಡದ ಅಧ್ಯಕ್ಷ ನೌಶಾದ್ ಜನ್ನತ್ ಮಾತನಾಡಿ, ದಾನಿಗಳ ಸಹಕಾರದಿಂದ ಸಂತ್ರಸ್ತರಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದ್ದು, ಸಂತ್ರಸ್ತರಿಗೆ ಸಹಾಯ ಮಾಡಲು ದಾನಿಗಳು ಕೈಜೋಡಿಸ ಬೇಕೆಂದ ಅವರು ಮುನ್ನೂರು ಕುಟುಂಬಗಳಿಗೆ ಬೇಕಾದ ಅಗತ್ಯ ಕಿಟ್ಟುಗಳನ್ನು ವಿತರಣೆ ಮಾಡಲಾಗಿದೆ. ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ವಿತರಣೆ ಮಾಡಲು ತಂಡ ಮುಂದಾಗಿದೆ ಎಂದು ಹೇಳಿದರು. ಸಿದ್ದಾಪುರ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಮುನಾ ಮಾತನಾಡಿ, ಕರಡಿಗೋಡು ಕಾವೇರಿ ನದಿ ದಡದಲ್ಲಿ ವಾಸವಾಗಿದ್ದ ನೂರಾರು ಕುಟುಂಬಗಳು ಆಸ್ತಿಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿರುವ ಸಂದರ್ಭ ಸರ್ಕಾರ ಮಾಡಬೇಕಾದ ಕೆಲಸ ದಾನಿಗಳು ಮಾಡುತ್ತಿದ್ದಾರೆ. ಕಾಸರಗೋಡು ಹಾಗೂ ರಾಜ್ಯದ ವಿವಿಧೆಡೆಗಳಿಂದ ದಾನಿಗಳ ನೆರವಿನಿಂದಲೇ ಬದುಕು ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ಇದುವರೆಗೂ ಶಾಶ್ವತ ಯೋಜನೆಗಳು ಹಾಗೂ ಸೂರುಗಳನ್ನು ಕಲ್ಪಿಸಲು ಮುಂದಾಗಿಲ್ಲ. ಸಂತ್ರಸ್ತರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಕಾಟಾಚಾರಕ್ಕೆ ಪರಿಹಾರಗಳನ್ನು ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಯಾವದೇ ಕಾರಣಕ್ಕೂ ಮತ್ತೆ ನದಿ ದಡಕ್ಕೆ ಹೋಗಲು ಸಿದ್ಧರಿಲ್ಲದ ಕಾರಣ ಜಿಲ್ಲಾಡಳಿತ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಬೇಕೆಂದು ಒತ್ತಾಯಿಸಿದರು

ಈ ಸಂದರ್ಭ ಪ್ರಮುಖರಾದ ಸಂತೋಷ್ ಕೊಂಡಂಗೆರಿ, ಕನ್ನಡ ಕಥಾಗುಚ್ಛ ಸಾಹಿತಿ ಬಳಗದ ಇರ್ಫಾನ್ ಹಸನ್ ಕುಟ್ಟಿ ಹಾಗೂ ದಯಾನಂದ್ ಸಾಗರ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ನಮ್ಮ ಕೊಡಗು ತಂಡದ ಪದಾಧಿಕಾರಿಗಳು ಹಾಜರಿದ್ದರು.