ಸೋಮವಾರಪೇಟೆ, ಆ. 22: ಪ್ರಾಥಮಿಕ ಶಾಲಾ ವಿಭಾಗದ ವಲಯಮಟ್ಟದ ಕ್ರೀಡಾಕೂಟಕ್ಕೆ ತಾಲೂಕು ಒಕ್ಕಲಿಗರ ಸಂಘದ ಕುವೆಂಪು ಶಾಲೆಯಲ್ಲಿ ಚಾಲನೆ ನೀಡಲಾಯಿತು.
ಕ್ರೀಡಾಕೂಟಕ್ಕೆ ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಚಾಲನೆ ನೀಡಿ ಮಾತನಾಡಿ, ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡಬೇಕು. ಕ್ರೀಡಾ ಚಟುವಟಿಕೆಗಳಿಂದ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಸಾಧ್ಯ ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿಜಯ ಕುಮಾರ್, ಒಕ್ಕಲಿಗರ ಸಂಘದ ಉಪಾಧ್ಯಕ್ಷ ರಾಘವ, ಕಾರ್ಯದರ್ಶಿ ಗಣಪತಿ, ಖಜಾಂಚಿ ಸುರೇಶ್, ಪದಾಧಿಕಾರಿಗಳಾದ ಎಸ್.ಜಿ. ಮೇದಪ್ಪ, ರಾಮಚಂದ್ರ, ಜಗದೀಶ್, ಶಿವಯ್ಯ, ಲಿಂಗರಾಜು, ಪೊನ್ನಪ್ಪ, ಮುಖ್ಯ ಶಿಕ್ಷಕಿ ಮಿಲ್ಡ್ರೆಡ್ ಗೊನ್ಸಾಲ್ವೆಸ್, ದೈಹಿಕ ಶಿಕ್ಷಣ ಶಿಕ್ಷಕರಾದ ಎನ್.ಎಂ. ನಾಗೇಶ್, ಇಂದಿರಾ, ವಸಂತಿ, ಮಂಜುಳಾ ಇದ್ದರು.
ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಬಾಲಕಿಯರ ವಿಭಾಗದಲ್ಲಿ ವಿಶ್ವಮಾನವ ಕುವೆಂಪು ಶಾಲೆ ಪ್ರಥಮ, ಸಾಂದೀಪನಿ ಶಾಲೆ ದ್ವಿತೀಯ ಸ್ಥಾನಗಳಿಸಿತು. ಬಾಲಕರ ವಿಭಾಗದಲ್ಲಿ ಕುವೆಂಪು ಶಾಲೆ ಪ್ರಥಮ ಹಾಗೂ ಜಿ.ಎಂ.ಪಿ. ಶಾಲೆ ದ್ವಿತೀಯ ಸ್ಥಾನ ಗಳಿಸಿದವು. ಮುಂದಿನ ವಿವಿಧ ಪಂದ್ಯಾಟಗಳು ಆ. 23, 24, 26 ರಂದು ಗೌಡಳ್ಳಿ ಬಿ.ಜಿ.ಎಸ್. ಶಾಲಾ ಮೈದಾನದಲ್ಲಿ ನಡೆಯಲಿದ್ದು, ಕುವೆಂಪು ಶಾಲೆ ಕ್ರೀಡಾಕೂಟದ ಮೇಲುಸ್ತುವಾರಿ ವಹಿಸಿದೆ.