ಕೂಡಿಗೆ, ಆ. 22: ಯುವಕರು ಉತ್ತಮ ಪ್ರಜಾಪ್ರಭುತ್ವವನ್ನು ನಿರ್ಮಾಣ ಮಾಡಬೇಕಾಗಿದೆ. ಸದೃಢ ಸಂಪನ್ನ ಸರ್ಕಾರವನ್ನು ಆಡಳಿತಕ್ಕೆ ತರುವ ಜವಾಬ್ದಾರಿ ನಿಮ್ಮದಾಗುತ್ತದೆ. ನಮ್ಮ ದೇಶದಲ್ಲಿ ಅತ್ಯಂತ ಶಕ್ತಿದಾಯಕವಾದ ಪ್ರತಿಯೊಬ್ಬ ಪ್ರಜೆಗೂ ಇರುವ ಹಕ್ಕು ಮತದಾನ. ಇದು ಬಡವನಿಗೂ ಶ್ರೀಮಂತನಿಗೂ ಸಮಾನವಾಗಿದೆ ಎಂದು ಕಣಿವೆಯ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಅವರು ಹೇಳಿದರು.

ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಚುನಾವಣಾ ಸಾಕ್ಷರತಾ ಕ್ಲಬ್ ಉದ್ಘಾಟನೆ ಸಮಾರಂಭದಲ್ಲಿ ಸಾಕ್ಷರತಾ ಕ್ಲಬ್ ಅನ್ನು ಉದ್ಘಾಟಿಸಿದ ಅವರು ಮಾತನಾಡಿ, ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಮುಗಿದ ಬಳಿಕ ಮತದಾರ ಪ್ರಭುಗಳು ಆಗುತ್ತೀರಿ. ಇಂದಿನ ದಿನಗಳಲ್ಲಿ ವೋಟುಗಳನ್ನು ಮಾರಿಕೊಂಡು ಮತದಾರ ಭ್ರಷ್ಟರಾಗುತ್ತಿದ್ದಾನೆ. ಅಂತಹ ಹೀನ ಕೆಲಸವನ್ನು ವಿದ್ಯಾರ್ಥಿಗಳು ಮಾಡಬಾರದು. ಅನುಭವ ಮಂಟಪವನ್ನು ಬಸವಣ್ಣನವರು ಸ್ಥಾಪನೆ ಮಾಡಿ ಪ್ರಜಾಪ್ರಭುತ್ವದ ತತ್ವಗಳಿಗೆ ತಳಹದಿ ರೂಪಿಸಿದರು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಹಂಡ್ರಂಗಿ ನಾಗರಾಜ್ ಅವರು, ನಾವು ನೀವೆಲ್ಲ ಸಾಕ್ಷರ ರಾಗಿದ್ದೇವೆ. ಆದರೆ ಚುನಾವಣಾ ಸಾಕ್ಷರರಾಗಬೇಕು. ಅದಕ್ಕಾಗಿ ಪದವಿ ಪೂರ್ವ ಶಿಕ್ಷಣ ಹಂತದಲ್ಲಿಯೇ ಚುನಾವಣಾ ಆಯೋಗ ನಿರ್ದೇಶನ ನೀಡಿ ಇಂತಹ ಕ್ಲಬ್‍ಗಳನ್ನು ಸ್ಥಾಪಿಸಿ ಅದರಿಂದ ತಿಳುವಳಿಕೆ ಮೂಡಿಸಲು ಪ್ರಯತ್ನಿಸುತ್ತಿದೆ. ಭಾರತದ ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡಬೇಕು ಎಂಬದು ಆಯೋಗದ ಆಶಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಜಿ. ಕೆಂಚಪ್ಪ, ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಇದ್ದರು.