ವೀರಾಜಪೇಟೆ, ಆ. 22: ಜಳಪ್ರಳಯಕ್ಕೆ ಕೊಡಗಿನ ಭೂ ಪ್ರದೇಶಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು. ಗುಂಡಿಕೆರೆ ಭಾಗದಲ್ಲಿಯು ಬಿರುಕು ಕಾಣಿಸಿಕೊಂಡಿರುವದು ತಡವಾಗಿ ಬೆಳಕಿಗೆ ಬಂದಿದೆ.

ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟೋಳಿ ಗುಂಡಿಕೆರೆ ಗ್ರಾಮದಲ್ಲಿ ಭೂ ಪ್ರದೇಶವು ಬಿರುಕು ಕಾಣಿಸಿಕೊಂಡಿದೆ ಎಂದು ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ. ಬಿರುಕುಗೊಂಡ ಭೂ ಪ್ರದೇಶದ ಸನಿಹದ ಮನೆಯಲ್ಲಿರುವ ತೆರೆದ ಭಾವಿಯ ತಡೆಗೋಡೆಯಲ್ಲಿ ಬಿರುಕು ಮತ್ತು ಮನೆಯ ಅಡಿಪಾಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಗ್ರಾಮದ ನಿವಾಸಿಯಾದ ಎಂ.ಎ ಅಬ್ದುಲ್ಲಾ ಮತ್ತು ಕುಟುಂಬ ವಾಸ ಮಾಡುತ್ತಿದ್ದ ಮನೆಯಾಗಿದೆ.

ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಎಂ ಇಸ್ಮಾಯಿಲ್ ಅವರು ನೀಡಿದ ಮಾಹಿತಿ ಮೇರೆಗೆ ಗ್ರಾಮದ ಲೆಕ್ಕಾಧಿಕಾರಿ ಸುಧೀರ್ ಅವರು ಸ್ಥಳಕ್ಕೆ ಭೇಟಿ ನೀಡಿ ಮನೆಯ ಮಾಲೀಕರಿಂದ ಮಾಹಿತಿ ಪಡೆದಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಪಂಚಾಯಿತಿ ಸದಸ್ಯರಾದ ಇಸ್ಮಾಯಿಲ್, ರಾಧ ಗಣಪತಿ ಮತ್ತು ಕಿರಣ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದರು.

-ಕೆ.ಕೆ.ಎಸ್. ವೀರಾಜಪೇಟೆ