ಅಬ್ಬಾ... ಅದೆಂತಹ ಗಾಳಿ - ಮಳೆಯಪ್ಪಾ...? ಎಲ್ಲಿ ಏನಾಗುತ್ತದೊ... ಯಾರ್ಯಾರ ಮನೆ - ತೋಟ, ಗದ್ದೆಗಳು ಜಲಾವೃತಗೊಂಡಿದೆಯೋ...? ಆ ದೇವರೇ ಬಲ್ಲ... ಅನ್ನುತ್ತಾ ಅತ್ತ ಮನೆಯ ಹೊರಗಡೆ ದಾಟಲಾಗದೇ... ಇತ್ತ ಮನೆಯ ಒಳಗಡೆ ಇರಲೂ ಮನಸ್ಸಿಲ್ಲದೆ ಒಮ್ಮೆ ಬೆಳಗಾದರೆ ಸಾಕು... ಪತ್ರಿಕೆಯನ್ನೊಮ್ಮೆ ನೋಡಿ ವಿಷಯ ತಿಳಿದುಕೊಳ್ಳುವ ಎಂದು ಕನವರಿಸುತ್ತಾ ಮುಚ್ಚಿದ ಕಿಟಕಿಯ ಸೆರೆಯಿಂದ ಇಣುಕಿ ನೋಡುತ್ತಾ ಕುಳಿತಿರುತ್ತಾರೆ ಮನೆಯವರು. ಕಾರಣ ಹಲವಾರು ಕಡೆಗಳಲ್ಲಿ ಕರೆಂಟಿಲ್ಲಾ... ಕರೆಂಟು ಇದ್ದರೂ ಆ ಗಳಿಗೆಗೊಮ್ಮೆ ಬಂದು ಇಣುಕಿ ನೋಡಿ ಹೋದರೆ, ಮತ್ತೆ ಅದರ ಸುಳಿವೆಯಿಲ್ಲ... ಯಾವದೇ ಗಾಳಿ - ಮಳೆ- ಚಳಿಯನ್ನು ಲೆಕ್ಕಿಸದೆ, ಗಡಗಡ ನಡುಗುತ್ತಾ... ಗಾಢ ನಿದ್ರೆಯಲ್ಲಿರುವ ಈ ಸಮಯದಲ್ಲಿ ತಾನೆದ್ದು, ಒದ್ದೆಯಾಗುತ್ತಾ ಓಡಾಡಿ ತನ್ನೊಂದಿಗಿರುವ ಪತ್ರಿಕೆಯು ನೆನೆಯಬಾರದೆಂದು ಪ್ಲಾಸ್ಟಿಕ್ ಸುತ್ತಿ, ಭದ್ರತೆಯ ಬ್ಯಾಗಿನಲ್ಲಿಟ್ಟು ಬೆಳ್ಳಂಬೆಳಗ್ಗೆ ಮನೆ ಬಾಗಿಲಿನತ್ತ ಕೊಂಡೊಯ್ಯುತ್ತಾರೆ. ಪತ್ರಿಕಾ ವಿತರಕರು ಅವರ ಗೋಳನ್ನು ಕೇಳುವವರಾರು? ಎಲ್ಲಿಯಾದರೂ ಪತ್ರಿಕೆ ಒಂದಿಷ್ಟು ನೆನೆದರೂ ಸಾಕು... ಯಾಕಪ್ಪ ಅಲ್ಲಿ - ಇಲ್ಲಿ ಪತ್ರಿಕೆ ಹಾಕುತ್ತೀಯಾ...? ಸರಿಯಾಗಿ ಮನೆಗೆ ತಲಪಿಸಲು ಆಗಲ್ಲವಾ...? ಏನು ಪುಕ್ಸಟೆ ಪತ್ರಿಕೆ ವಿತರಿಸುತ್ತೀಯಾ...? ಎಂಬಿತ್ಯಾದಿ ನೂರೆಂಟು ಕೊಂಕು ಮಾತುಗಳು ಬೇರೆ...? ಪತ್ರಿಕೆ ನನ್ನ ಮನೆ ಸೇರಿದರೆ ಸಾಕಪ್ಪ ಅನ್ನುವ ಭಾವನೆ ಅನೇಕರದ್ದು.

ಅದೇ ಒಮ್ಮೆ ಪತ್ರಿಕೆ ವಿತರಿಸುವವರ ಬಗ್ಗೆಯಾಗಲಿ, ಏಜೆಂಟರ ಬಗ್ಗೆ ಆಲೋಚಿಸಿದರಾ...? ಅವರು ಕೂಡ ನಮ್ಮಂತೆಯೇ ಮನುಷ್ಯರಲ್ಲವೇ...? ಗಾಳಿ - ಮಳೆಯನ್ನು ಲೆಕ್ಕಿಸದೆ, ನಡುಗುತ್ತಾ, ಮನೆ ಬಾಗಿಲಿಗೆ ಪತ್ರಿಕೆ ತಂದಾಗ, ಬಾಗಿಲಲ್ಲಿ ಹಾಕಿದಾಗ... ಅವರ ಯೋಗ ಕ್ಷೇಮ ವಿಚಾರಿಸಿದವರಂತೂ ವಿರಳವೇ. ಅದರ ಬದಲು ಪತ್ರಿಕಾ ವಿತರಕರು ಕೂಡ ನಮ್ಮಂತೆ ಅಲ್ಲವೇ? ಅವರಿಗಾಗಿ ಒಂದಿಷ್ಟು ಸಮಯ ಖರ್ಚು ಮಾಡಲು ಸಾಧ್ಯವಿಲ್ಲವೇ? ಅವರೊಂದಿಗೆ ನಾವು ಕೂಡ ಒಂದಿಷ್ಟು ಕೈಜೋಡಿಸಿದಲ್ಲಿ ಪತ್ರಿಕೆ ಹರಿಯದು, ನೆನೆಯದು ಅಲ್ಲವೇ?

ಹಲವಾರು ಕಡೆಗಳಲ್ಲಿ ಪತ್ರಿಕೆ ಪಡೆಯಲು ಏಜೆಂಟರು ಕಾದು ಕುಳಿತಿರುತ್ತಾರೆ. ಆ ಸಮಯದಲ್ಲಿ ಓದುಗರು ಕೂಡ ಸಹಕಾರ ನೀಡುವದೊಳಿತಲ್ಲವೇ?

ಒಂದು ಪತ್ರಿಕೆ ಓದುಗರ ಮುಂದೆ ಬರಬೇಕಾದರೆ ಅದೆಷ್ಟು ಏಳು- ಬೀಳುಗಳನ್ನು, ಕಷ್ಟ - ಕಾರ್ಪಣ್ಯಗಳನ್ನು ಕಾಣಬೇಕೆಂಬದು ಪತ್ರಿಕೆ ಹೊರತರುವವರಿಗೆ ಮಾತ್ರ ಗೊತ್ತು. ಅಲ್ಲಿನ ಆಡಳಿತ ಮಂಡಳಿ ಶ್ರಮ... ಹಗಳಿರುಳೆನ್ನದೆ ಸುದ್ದಿ ಬಿತ್ತರಿಸುವ ಸುದ್ದಿಗಾರರ ಪರಿಶ್ರಮ... ಕಣ್ಣಲ್ಲಿ ಕಣ್ಣಿಟ್ಟು ತಪ್ಪಾಗದಂತೆ ನೋಡಿಕೊಳ್ಳುವದು... ಒಂದಾ... ಎರಡಾ... ನೂರೆಂಟು ಸಮಸ್ಯೆಗಳ ಮಧ್ಯೆ ಪತ್ರಿಕೆ ಸಮಾಜಕ್ಕೆ ಬೆಳಕು ಚೆಲ್ಲಬೇಕಾಗಿದೆ. ಅಂತಹದರಲ್ಲಿ ಗಾಳಿ - ಮಳೆ- ಚಳಿಯನ್ನು ಲೆಕ್ಕಿಸದೆ, ನಾಡಿನ ಚಿತ್ರಣವನ್ನು ನಾಲ್ಕಾರು ಹಾಳೆಯಲ್ಲಿ ನಾಡಿನಾದ್ಯಂತ ಕಣ್ಣಮುಂದೆ ತಂದು ನಿಲ್ಲಿಸುವ ಪತ್ರಿಕಾ ವಿತರಕರು - ಏಜೆಂಟರಿಗೆ ಹ್ಯಾಟ್ಸಪ್ ಅನ್ನಲೇಬೇಕು. ಇದರ ಮಧ್ಯೆ ಪುಕ್ಸಟೆ ಓದುಗರ ಕಿರಿಕಿರಿ ಬೇರೆ. ಪತ್ರಿಕೆಯ ಮೇಲೆ ಮುಗಿಬೀಳುತ್ತಾರೆ.

ಪ್ರತಿಯೊಬ್ಬರೂ ಬದುಕಿನಲ್ಲೊಂದಿಷ್ಟು ಬದಲಾವಣೆ, ಸಹಾನುಭೂತಿ, ನೆಮ್ಮದಿಯನ್ನು ರೂಢಿಸಿಕೊಳ್ಳಬೇಕು. ಪತ್ರಿಕಾ - ಹಾಲು ವಿತರಕರು, ಏಜೆಂಟರೂ ಕೂಡ ನಮ್ಮವರು. ಅಣ್ಣ - ತಮ್ಮಂದಿರು ಎಂಬದನ್ನು ಅರಿತು ಹೃದಯಪೂರ್ವಕ ಸಹಾಯ, ಸಹಕಾರ, ಸಹಾನುಭೂತಿ ನೀಡಿ, ಎಷ್ಟೇ ಗಾಳಿ - ಮಳೆ- ಚಳಿ ಇದ್ದರೂ ನಿತ್ಯ ಸುದ್ದಿಯನ್ನೊತ್ತು ಮನೆಗೆ ಆಗಮಿಸುವ ಪತ್ರಿಕಾ ವಿತರಣಾ ಮಿತ್ರರಿಗೆ, ಏಜೆಂಟರಿಗೆ ನಾವು ಅಂತರಾಳದ ಕೃತಜ್ಞತೆ ಅರ್ಪಿಸೋಣ...

-ಕೂಡಂಡ ಸಾಬ ಸುಬ್ರಮಣಿ, ಹೊದ್ದೂರು.