ಪೊನ್ನಂಪೇಟೆ. ಆ. 21: ಇತ್ತೀಚೆಗೆ ಸುರಿದ ಭಾರೀ ಮಳೆಯ ಸಂದರ್ಭ ಕಾನೂರು ಗ್ರಾಮದ ಎಸ್.ಎಂ ಬಸಪ್ಪ ಎಂಬವರ ಮಾಲೀಕತ್ವದ ಬಸವೇಶ್ವರ ಕಾಫಿ ಕ್ಯೂರಿಂಗ್ ವಕ್ರ್ಸ್‍ಗೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಗೋಡೌನ್‍ನೊಳಗೆ ಇದ್ದ 250 ಚೀಲ ಕಾಫಿಬೀಜ ನೀರಿನಿಂದ ನೆನೆದು ಹೋಗಿದೆ.

ಬಿಸಿಲು ಇಲ್ಲದ ಕಾರಣ ನೆನೆದು ಹೋಗಿದ್ದ ಕಾಫಿಬೀಜವನ್ನು ಮೈಸೂರು ಜಿಲ್ಲೆಯ ಸರಗೂರು ಎಪಿಎಂಸಿ ಆವರಣದಲ್ಲಿ ಒಣಗಿಸುತ್ತಿದ್ದ ಸಂದರ್ಭ ಅಲ್ಲಿಯೂ ಕೂಡ ಮಳೆ ಬಂದ ಹಿನ್ನೆಲೆ ವಾಪಸು ತಂದು ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ. ಇದರಿಂದ ಸುಮಾರು 5 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. ಹುದಿಕೇರಿ ಸಮೀಪದ ಹೈಸೊಡ್ಲೂರು ಗ್ರಾಮದ ಮಂಡಂಗಡ ಅರ್ಜುನ (ರಾಜ) ಎಂಬವರಿಗೆ ಸೇರಿದ ತೋಟದಲ್ಲಿ ಬರೆ ಕುಸಿದು ಅಡಿಕೆ ಹಾಗೂ ಕಾಫಿ ಗಿಡಗಳು ಧರೆಗುರುಳಿವೆ. ಸಾವಿರಾರು ರೂಪಾಯಿ ನಷ್ಷ ಸಂಭವಿಸಿದೆ.