ಆಲೂರು-ಸಿದ್ದಾಪುರ, ಆ. 22: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ಬಾಲೆ ವಲಯ ಒಕ್ಕೂಟದ ಅರಿಶಿನಗುಪ್ಪೆ ಗ್ರಾಮದ ಶ್ರೀ ಮಂಜುನಾಥ ದೇವಸ್ಥಾನ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಗ್ರಾಮಸ್ಥರ ಒಳಿತಿಗಾಗಿ ಹಾಗೂ ಜಿಲ್ಲೆಯಲ್ಲಿ ಉದ್ಬವಿಸಿರುವ ಜಲಪ್ರಳಯ ಮತ್ತು ಪ್ರಕೃತಿ ವಿಕೋಪ ಶಮನಕ್ಕಾಗಿ ಜನರನ್ನು ಜಾನುವಾರು ಪ್ರಾಣಿಗಳನ್ನು ಮತ್ತು ಪ್ರಕೃತಿಯನ್ನು ರಕ್ಷಣೆ ಮಾಡುವ ಸಲುವಾಗಿ ಗ್ರಾಮದ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಮಹಾಪೂಜಾ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳ ಲಾಯಿತು. ಬೆಳಗ್ಗೆಯಿಂದ ಹೋಮ ಹವನ, ಪೂಜಾ ವಿಧಿವಿಧಾನಗಳನ್ನು ಹಮ್ಮಿಕೊಳ್ಳಲಾಯಿತು.
ಗ್ರಾಮದ ಎಲ್ಲ ಸಮುದಾಯದವರಿಗೆ ಒಳಿತಾಗುವಂತೆ ಹಾಗೂ ಜಿಲ್ಲೆಯಲ್ಲಿ ಯಾವದೇ ಪ್ರಕೃತಿ ವಿಕೋಪ, ಅನಾಹುತಗಳಾಗದಂತೆ ಸಾಮೂಹಿಕ ವರಮಹಾಲಕ್ಷ್ಮಿ ಮಹಾ ಪೂಜೆಯನ್ನು ಭಕ್ತಿಪೂರ್ವಕವಾಗಿ ನೆರವೇರಿಸಲಾತು.
ಧಾರ್ಮಿಕ ಸಮಾರಂಭದಲ್ಲಿ ಶ್ರೀ ಮಂಜುನಾಥ ದೇವಸ್ಥಾನದ ರಾಜೇಶನಾಥ ಗುರೂಜಿ ಮಾತನಾಡಿ, ಸಮಾಜದಲ್ಲಿ ಮಾನವನನ್ನು ಮನುಷ್ಯನ್ನಾಗಿ ಕೊಂಡೊಯ್ಯುವ ಕಾರ್ಯ ಧಾರ್ಮಿಕ-ಆಧ್ಯಾತ್ಮಿಕ-ಸಂಸ್ಕಾರ ಕಾರ್ಯಕ್ರಮಗಳಿಂದ ಸಾಧ್ಯವಾಗುತ್ತದೆ ಎಂದರು. ಪ್ರತಿಯೊಬ್ಬರಲ್ಲಿ ಮಾನವಿಯತೆ-ಮನುಷ್ಯತ್ವ ಮನೋಭಾವನೆ ಮೂಡಿಸುವ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಮ್ಮಿಕೊಳ್ಳುತ್ತಿರುವದು ಶ್ಲಾಘನೀಯ ವಾಗಿದ್ದು, ಸಮಾಜದಲ್ಲಿ ಧರ್ಮ, ಜಾತಿ, ಜನಾಂಗ, ಭೇದಭಾವ ಇಲ್ಲದೆ ಸಾಮೂಹಿಕವಾಗಿ ಬೆರೆತು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳು ವದರಿಂದ ಇಡೀ ಸಮೂಹ ಸಮಾಜಕ್ಕೆ ಒಳಿತಾಗುತ್ತದೆ ಎಂದರು. ಇಂದು ಸರಕಾರದ ಯೋಜನೆಯಿಂದ ಅರ್ಹ ಫಲಾನುಭವಿಗಳಿಗೆ ಸೇವೆ ಸವಲತ್ತುಗಳು ಸರಿಯಾಗಿ ಸಿಗುವದಿಲ್ಲ. ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಕಾರ್ಯ ಕ್ರಮಗಳ ಮೂಲಕ ಎಲ್ಲಾ ಫಲಾನು ಭವಿಗಳಿಗೆ ಸೇವೆ ಸವಲತ್ತುಗಳು ಸಿಗುತ್ತಿದೆ ಹಾಗೂ ಸಂಸ್ಥೆಯ ಅಧಿಕಾರಿಗಳು, ಕಾರ್ಯಕರ್ತರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದು, ಇದರ ಫಲವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಸಬಲೀಕರಣ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಪರಿಸರ, ಸ್ವಚ್ಛತೆ ಅಭಿವೃದ್ಧಿಯಾಗುತ್ತಿದೆ ಎಂದರು. ಪ್ರತಿಯೊಂದು ಸಂಸಾರ ಅಭಿವೃದ್ಧಿಯಾಗುವದರ ಜೊತೆಯಲ್ಲಿ ಇಡೀ ಸಮಾಜ ಮತ್ತು ಜಿಲ್ಲೆ ಪ್ರಕೃತಿ ವಿಕೋಪ ಮುಂತಾದ ಪ್ರಾಕೃತಿಕ ಸಮಸ್ಯೆಯಿಂದ ಮುಕ್ತವಾಗಲು ಸಾಮೂಹಿಕವಾಗಿ ಧಾರ್ಮಿಕ ಕಾರ್ಯಗಳ ಅಗತ್ಯವಿದೆ ಎಂದರು. ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇವಲ ಮಹಿಳೆಯರ ಆರ್ಥಿಕ ಸಬಲೀಕರಣ, ಆರ್ಥಿಕ ವ್ಯವಹಾರ ಪ್ರಗತಿಯ ಉದ್ದೇಶವಾಗದೆ. ಸಮಾಜದಲ್ಲಿ ಪ್ರತಿಯೊಂದು ಸಮುದಾಯದವರಲ್ಲಿ ಧಾರ್ಮಿಕ ಮನೋಭಾವನೆ ಬೆಳೆಯ ಬೇಕೆಂಬ ಉದ್ದೇಶದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ವರ ಮಹಾಲಕ್ಷ್ಮಿ ಪೂಜೆ, ಸಹಸ್ರನಾಮ ಭಜನೆ ಮುಂತಾದ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗುತ್ತಿದೆ ಎಂದರು. ಪುರುಷರು ದುಶ್ಚಟಗಳಿಂದ ದೂರ ಇರಬೇಕು. ಇದರಿಂದ ಸಂಸಾರವೊಂದು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಹಾಗೂ ಪುರುಷರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಧಾರ್ಮಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹೆಬ್ಬಾಲೆ ವಲಯದ ಮೇಲ್ವಿಚಾರಕ ಕೆ. ವಿನೋದ್ಕುಮಾರ್, ಒಕ್ಕೂಟದ ಅಧ್ಯಕ್ಷೆ ವಿಮಲ, ಗ್ರಾ.ಪಂ. ಸದಸ್ಯ ರವಿಕುಮಾರ್, ಪ್ರಮುಖರಾದ ರಾಮಣ್ಣ ಮೀನಾಕ್ಷಿ, ಒಕ್ಕೂಟದ ಕಾರ್ಯದರ್ಶಿ ನೇತ್ರ ಹಾಜರಿದ್ದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು, ಗ್ರಾಮದ ಮಹಿಳೆಯರು ಹಾಗೂ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮತ್ತು ಅನ್ನದಾನವನ್ನು ಏರ್ಪಡಿಸಲಾಗಿತ್ತು.
- ದಿನೇಶ್ ಮಾಲಂಬಿ