ಚೆಟ್ಟಳ್ಳಿ, ಆ. 22: ಇತ್ತೀಚೆಗೆ ಸುರಿದ ಮಹಾಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳು ನೀರಿನಲ್ಲಿ ಮುಳುಗಿ ಹೋಗಿದ್ದು ಹಲವು ಸಾವು ನೋವುಗಳೊಂದಿಗೆ ಆಸ್ತಿ ಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿರುವ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಆರೋಪಿಸಿದ್ದಾರೆ.

ವೀರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿತರಿಸಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಮಳೆಯ ಪ್ರವಾಹಕ್ಕೆ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತ ಪರಿಹಾರ ಕೇಂದ್ರಗಳಲ್ಲಿ ಸಂಕಷ್ಟದ ಬದುಕು ಸಾಗಿಸುತ್ತಿರುವ ನಿರಾಶ್ರಿತರಿಗೆ ಶಾಶ್ವತ ಯೋಜನೆ ಹಾಗೂ ಧೈರ್ಯ ತುಂಬುವ ಕೆಲಸವಾಗುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಸಚಿವ ಸಂಪುಟ ರಚನೆಯಲ್ಲಿ ದಿನ ಕಳೆದರೆ, ಪ್ರಧಾನಮಂತ್ರಿ ಹೊರ ದೇಶ ಪ್ರವಾಸದಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಶಾಶ್ವತ ಯೋಜನೆಗಳನ್ನು ರೂಪಿಸಿ ಸಮಸ್ಯೆ ಬಗೆಹರಿಸದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪಕ್ಷದ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್ ಮಾತನಾಡಿ, ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಕೊಡಗು, ಗೋಕಾಕ್ ಸೇರಿದಂತೆ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳಿಗೆ ಸಂದಿಸುವ ಮೂಲಕ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಸರ್ಕಾರ ಸಂತ್ರಸ್ತರಿಗೆ ಯಾವದೇ ಮುಂಜಾಗ್ರತಾ ಕ್ರಮ ವಹಿಸದೇ ಕೇವಲ ಕಾಟಾಚಾರಕ್ಕೆ ಗಂಜಿ ಕೇಂದ್ರದಂಥ ಪರಿಹಾರ ಕೇಂದ್ರಗಳನ್ನು ತೆರೆದು ಸಂತ್ರಸ್ತರು ದಿನ ಕಳೆಯುವಂತೆ ಮಾಡಿದ್ದಾರೆ ಕೊಡಗು ಸೇರಿದಂತೆ ಹಲವು ಜಿಲ್ಲೆಗಳ ನದಿ ದಡಗಳಲ್ಲಿ ವಾಸ ಮಾಡುತ್ತಿದ್ದ ಗ್ರಾಮಗಳು ಮುಳುಗಿ ಸಾವಿರಾರು ಮನೆಗಳು ನೆಲಸಮವಾಗಿದೆ ಸಂಕಷ್ಟದ ಬದುಕಿನ ನಡುವೆ ಜೀವನ ನಡೆಸುತ್ತಿದ್ದ ಕುಟುಂಬ ಇದೀಗ ಅನಾಥವಾಗಿದ್ದು ಸರಕಾರ ಕೂಡಲೇ ಶಾಶ್ವತ ಪುನರ್ವಸತಿ ಕಲ್ಪಿಸುವ ಮೂಲಕ ಸ್ಪಂದಿಸ ಬೇಕೆಂದರು.

ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ. ಬಶೀರ್ ಮಾತನಾಡಿ, ಕೊಡಗು ನದಿ ದಡದ ನಿವಾಸಿಗಳಲ್ಲಿ ಅಗತ್ಯ ದಾಖಲೆಗಳು ಇಲ್ಲದೆ ಇರುವದರಿಂದ ಮಾನವೀಯತೆ ನೆಲೆಯಲ್ಲಿ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ. ಸರಕಾರಿ ಜಾಗಗಳನ್ನು ಒತ್ತುವರಿದಾರರಿಂದ ಬಿಡಿಸಿ ನಿವೇಶನ ನೀಡಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಸುಲೈಮಾನ್ ಕಲ್ಲರ್ಪೆ ಇದ್ದರು.