ಶ್ರೀಮಂಗಲ, ಆ. 21: ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಕೊಡಗು ಜಿಲ್ಲೆಗೆ ಯಾವದೇ ಸಚಿವ ಸ್ಥಾನವನ್ನು ನೀಡದಿರುವದು ಕೊಡಗು ಜಿಲ್ಲೆಯನ್ನು ರಾಜ್ಯ ಸರ್ಕಾರ ಕಡೆಗಣಿಸಿದಂತಾಗಿದ್ದು, ಕೂಡಲೇ ಅನುಭವಿ ಮತ್ತು ನಾಲ್ಕು ಬಾರಿ ಶಾಸಕರಾಗಿರುವ, ಜೊತೆಗೆ ವಿಧಾನ ಸಭಾದ್ಯಕ್ಷರಾಗಿ ಸೇವೆ ಸಲ್ಲಿಸಿರುವ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕೇಂದು ವೀರಾಜಪೇಟೆ ತಾಲೂಕು ಬಿ.ಜೆ.ಪಿ. ಉಪಾದ್ಯಕ್ಷ ಮತ್ತು ಟಿ.ಶೆಟ್ಟಿಗೇರಿ ಗ್ರಾ.ಪಂ. ಅದ್ಯಕ್ಷ ಮಚ್ಚಮಾಡ ಸುಮಂತ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಕೊಡಗು ಜಿಲ್ಲೆ ಕಳೆದ 2 ವರ್ಷದಿಂದ ನಿರಂತರವಾಗಿ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ನಲುಗಿ ಹೋಗಿದೆ. ಇನ್ನೂ ಜನರು ಮತ್ತು ಭೂ ಪ್ರದೇಶ ಸಹಜ ಸ್ಥಿತಿಗೆ ಬಂದಿಲ್ಲ ಅಲ್ಲದೆ ಕೊಡಗು ಜಿಲ್ಲೆ ತನ್ನದೆ ಆದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸ್ಥಳೀಯ ಶಾಸಕರಿಗೆ ಈ ಬಗ್ಗೆ ಅರಿವು ಇರುವದರಿಂದ ಬೋಪಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಹೊರ ಜಿಲ್ಲೆಯವರು ಸಚಿವರಾಗಿ ಮತ್ತು ಉಸ್ತುವಾರಿ ಸಚಿವರಾಗಿಯೂ ಕೊಡಗು ಜಿಲ್ಲೆಯ ಸಮಸ್ಯೆಯ ಬಗ್ಗೆ ಅರಿವು ಹೊಂದಿಲ್ಲ. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ವಂಚಿತವಾಗಿರುವದರಿಂದ ಜಿಲ್ಲೆಯ ಸಮಸ್ಯೆ ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆ ಬಿ.ಜೆ.ಪಿ.ಯ ಭದ್ರಕೋಟೆಯಾಗಿದ್ದು ಗ್ರಾ.ಪಂ., ತಾ.ಪಂ., ಜಿ.ಪಂ, ಸೇರಿದಂತೆ ಎರಡು ಶಾಸಕರು, ಒಂದು ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರನ್ನು ಪಕ್ಷದಿಂದ ಆಯ್ಕೆಮಾಡಿ ಆಡಳಿತ ಹಿಡಿದಿದೆ. ಹೀಗಿದ್ದರೂ ಕೊಡಗಿಗೆ ಸಚಿವ ಸ್ಥಾನ ನೀಡದೆ ಜಿಲ್ಲೆಯನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಪಕ್ಷದಿಂದ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.