(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಆ. 22: ಯಾವದೇ ಮಳೆ, ಮಹಾಮಳೆ, ರಕ್ಕಸ ಮಳೆ ಬರಲಿ ಇಲ್ಲಿಯ ಜನತೆಗೆ ಭಯವಿಲ್ಲ.ಕಾರಣ ಮಳೆ ನೀರು ಎಷ್ಟೇ ಬಂದರೂ ಹರಿದು ಹೋಗಲು ಇಲ್ಲಿ ತೊಂದರೆ ಇಲ್ಲ. ಇಲ್ಲಿಯ ತನಕ ಎಷ್ಟೋ ದೊಡ್ಡ ಮಳೆಗಳು ಬಂದು ಹೋಗಿವೆ. ಆದರೆ ಇಲ್ಲಿಯ ಜನತೆಗೆ ಯಾವದೇ ತೊಂದರೆಯಾಗಿಲ್ಲ. ಸಮೀಪವಿರುವ ಕಾಫಿ ಬೆಳೆಗಾರರ ಕೆರೆ ನೀರು ತುಂಬಿತೆಂದರೆ ಇಲ್ಲಿಯ ಜನತೆ ಬೆಚ್ಚಿಬೀಳ್ತಾರೆ. ಅಲ್ಲದೆ ಯಾವ ಸಮಯದಲ್ಲಿ ನೀರು ನುಗ್ಗಬಹು ದೆಂದು ನಿದ್ರೆಬಿಟ್ಟು ಭಯದಲ್ಲೇ ದಿನ ಕಳೆಯುತ್ತಾರೆ.

ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಧನುಗಾಲ ಗ್ರಾಮವು ಮೈಸೂರು, ಗೋಣಿಕೊಪ್ಪ ರಾಜ್ಯ ಹೆದ್ದಾರಿಯ ಸುಮಾರು ಒಂದು ಕಿ.ಮೀ. ಸಮೀಪದಲ್ಲಿರುವ ಚೆನ್ನಂಗೊಲ್ಲಿ ಪೈಸಾರಿಯಲ್ಲಿ ಸಾವಿರಕ್ಕೂ ಅಧಿಕ ಮತದಾರರಿದ್ದಾರೆ. ಎರಡು ಸಾವಿರ ಜನಸಂಖ್ಯೆವುಳ್ಳ ಈ ಪ್ರದೇಶದಲ್ಲಿ 500ಕ್ಕೂ ಅಧಿಕ ವಿವಿಧ ಸಮುದಾಯದ ಕುಟುಂಬಗಳು ವಾಸವಾಗಿದ್ದಾರೆ. ಬಹುತೇಕ ಕುಟುಂಬಗಳು ದಿನನಿತ್ಯದ ಕೂಲಿ ಕೆಲಸವನ್ನೇ ನಂಬಿರುವವರು.

ವಾಸಕ್ಕೊಂದು ಮನೆ ಬೇಕೆಂಬ ಆಸೆಯಿಂದ ಸಿಕ್ಕ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಲವಾರು ದಶಕಗಳಿಂದ ವಾಸವಿರುವ ಇಲ್ಲಿಯ ಜನತೆಯ ಅನುಕೂಲಕ್ಕಾಗಿ ಅಂಚೆ ಕಚೇರಿ,ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಯನ್ನು ಸರ್ಕಾರ ನೀಡಿದೆ.ವಿದ್ಯುತ್,ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿದೆ.ಆದರೆ ಈ ಗ್ರಾಮಕ್ಕೆ ತೆರಳುವ ರಸ್ತೆಯನ್ನು ನೋಡಿದರೆ, ಸಾಕಪ್ಪ ಸಾಕು ಎಂದೆನಿಸುತ್ತದೆ. ಇಲ್ಲಿಯ ಗ್ರಾಮದ ಅವ್ಯವಸ್ಥೆ. ಅನೇಕ ಸರ್ಕಾರ ಬಂದರೂ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿ ತೆರಳುವ ಇವರು ಮತ್ತೊಂದು ಚುನಾವಣೆಗೆ ಹಾಜರಾಗು ವದು ಮಾಮೂಲಿಯಾಗಿದೆ. ಇಲ್ಲಿಯ ಜನತೆ ತಮ್ಮ ಕಷ್ಟಗಳನ್ನು ಹೇಳುತ್ತ ಕಣ್ಣೀರು ಸುರಿಸಿದರೂ ಜನಪ್ರತಿನಿಧಿಗಳ ಮನಸ್ಸು ಮಾತ್ರ ಇನ್ನೂ ಕರಗಿಲ್ಲ.

ಇತ್ತೀಚೆಗೆ ಸುರಿದ ಭಾರೀ ಮಳೆಗೆ ಎರಡು ಮನೆಗಳು ಸಂಪೂರ್ಣ ನಾಶಗೊಂಡಿದ್ದು 20ಕ್ಕೂ ಅಧಿಕ ಮನೆಗಳು ವಾಸಿಸಲು ಯೋಗ್ಯವಿಲ್ಲದ ಪರಿಸ್ಥಿತಿಗೆ ತಂದೊಡ್ಡಿದೆ. ಹರಿಯುವ ಕಾಲುವೆಯ ತೋಡು ಸಂಪೂರ್ಣ ಹಾಳಾಗಿವೆ. ಮನೆ ಮುಂಭಾಗಕ್ಕೆ ಮೇಲ್ಭಾಗದಿಂದ ಬಂದ ಮರಳು ಮಿಶ್ರಿತ ಮಣ್ಣು ಆವರಿಸಿದೆ.

ಇಲ್ಲಿಯ ಜನತೆ ಮಹಾಮಳೆಗೆ ಹೆದರಿದವರಲ್ಲ ಕಾರಣ ಮಳೆ ನೀರು ಎಷ್ಟೇ ಬಂದರೂ ಸಲೀಸಾಗಿ ಹೋಗಲು ಮೇಲ್ಭಾಗದಿಂದ ಹರಿಯು ತ್ತಿರುವ ತೋಡು ವಿಸ್ತಾರವಿರು ವದರಿಂದ ಇಲ್ಲಿನ ಜನತೆಗೆ ಸಮಸ್ಯೆ ತಂದೊಡ್ಡಿಲ್ಲ.ಆದರೆ ಮನೆಯ ಮೇಲ್ಭಾಗದಲ್ಲಿರುವ ಕಾಫಿ ಬೆಳೆಗಾರರೊಬ್ಬರ ಬೃಹತ್ ಪ್ರಮಾಣದ ಕೆರೆ ಕಂಡರೆ ಇಲ್ಲಿಯ ಜನತೆ ಈಗಲೂ ಬೆಚ್ಚಿ ಬೀಳ್ತಾರೆ. ಕಾರಣ ಈ ಬೃಹತ್ ಕೆರೆಯು ಮಳೆ ನೀರು ತುಂಬಿದ ಸಂದರ್ಭ ಇಲ್ಲಿನ ಕೆರೆಯು ಹೊಡೆದು ಕೆಳಗಿರುವ ವಾಸದ ಮನೆಗಳಿಗೆ ರಭಸವಾಗಿ ನುಗ್ಗುವ ಮೂಲಕ ಹಾನಿಯನ್ನು ಉಂಟುಮಾಡುತ್ತಿವೆ. ಈ ಬಾರಿಯೂ ಈ ಕೆರೆ ತುಂಬಿ ಒಡೆದಿರುವದರಿಂದ ಕೆಳಭಾಗದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಮನೆ ಬೀಳುವ ಪರಿಸ್ಥಿತಿ ತಂದೊಡ್ಡಿದೆ. ತೋಟದ ಮಾಲೀಕರು ತಮ್ಮ ಕೆರೆಗೆ ರಸ್ತೆಯಲ್ಲಿ ಹರಿದು ಬರುವ ನೀರನ್ನು ಸಹ ತುಂಬಿಸಿಕೊಳ್ಳುತ್ತಿರುವದರಿಂದ ಈ ಕೆರೆ ಮಳೆಗಾಲದಲ್ಲಿ ಬೇಗನೇ ತುಂಬಿಹೋಗುತ್ತಿದೆ. ಹೆಚ್ಚಾದಾಗ ಕೆಳಗಿನ ಮನೆಯವರ ಕಷ್ಟವನ್ನು ನೋಡದೆ ಕೆರೆ ನೀರು ತುಂಬಿ ಹೊರ ಬರುವದರಿಂದ ಇಂತಹ ಪರಿಸ್ಥಿತಿ ಎದುರಿಸಬೇಕಾದ ಅನಿವಾರ್ಯತೆ ಇಲ್ಲಿಯ ಜನತೆಯದ್ದಾಗಿದೆ ಎಂದು ನೊಂದವರ ಮಾತಾಗಿದೆ.

ಈ ಬಗ್ಗೆ ಹಲವು ಬಾರಿ ದೂರುಗಳನ್ನು ಪಂಚಾಯಿತಿಗೆ ನೀಡಿದ್ದರೂ ಇಲ್ಲಿಯ ತನಕ ಸ್ಪಂದನ ಮಾಡಿಲ್ಲ. ಜಿಲ್ಲಾಡಳಿತ ಈ ಪ್ರದೇಶಕ್ಕೆ ಭೇಟಿ ನೀಡುವ ಮೂಲಕ ಇಲ್ಲಿಯ ಜನತೆಯ ಕಷ್ಟವನ್ನು ಆಲಿಸಬೇಕಾಗಿದೆ. ಭವಿಷ್ಯದ ದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕಾಗಿದೆ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.